ಹೊಸಕುಂದವಾಡದಲ್ಲಿ ಒಂದೇ ದಿನ 7 ಸಾವು

ಹೊಸಕುಂದವಾಡದಲ್ಲಿ ಒಂದೇ ದಿನ 7 ಸಾವು

ಅಂತ್ಯಕ್ರಿಯೆಗೆ ಸ್ಮಶಾನ ಇಲ್ಲದೆ ಪರದಾಟ, ಪ್ರತಿಭಟನೆ, ತಹಶೀಲ್ದಾರ್ ಭೇಟಿ

ದಾವಣಗೆರೆ, ಜು.11- ತಾಲ್ಲೂಕಿನ ಹೊಸ ಕುಂದವಾಡದಲ್ಲಿ ಗುರುವಾರ ಒಂದೇ ದಿನ 7 ಜನರು ಪ್ರತ್ಯೇಕವಾಗಿ ಮೃತಪಟ್ಟ ಘಟನೆ ನಡೆದಿದೆ.

ಮಾರಮ್ಮ (70), ಸಂತೋಷ (30), ಈರಮ್ಮ (60), ಸುನೀಲ್ (25), ಶಾಂತಮ್ಮ (65) ಭೀಮಕ್ಕ (70) ಹಾಗೂ ಎರಡು ದಿನದ ನವಜಾತ ಶಿಶು ಮೃತಪಟ್ಟವರು.

ಈ ಪೈಕಿ ಮಾರಮ್ಮ, ಈರಮ್ಮ, ಶಾಂತಮ್ಮ, ಭೀಮಕ್ಕ ವಯೋಸಹಜದಿಂದ ಮೃತಪಟ್ಟಿದ್ದು, ಸಂತೋಷ, ಸುನೀಲ್‌ ಹಾಗೂ ನವಜಾತ ಶಿಶು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಒಂದೇ ದಿನ ಏಳು ಜನರು ಮೃತಪಟ್ಟಿದ್ದರಿಂದ ಅಂತ್ಯಕ್ರಿಯೆಗೆ ಸ್ಮಶಾನ ಇಲ್ಲದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

5000ಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಸ್ಮಶಾನ ಇಲ್ಲ.  ಇದುವರೆಗೂ ಪಕ್ಕದ ಹಳೆಕುಂದುವಾಡ ಗ್ರಾಮಕ್ಕೆ ಹೋಗಿ ಗ್ರಾಮಸ್ಥರು ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ ಮಾರಿ ಜಾತ್ರೆ ಮಾಡುವ ವಿಚಾರದಲ್ಲಿ ಎರಡೂ ಗ್ರಾಮಸ್ಥರ ಮಧ್ಯೆ ಈಚೆಗೆ ಮನಸ್ತಾಪವಾಗಿತ್ತು. ಈ ಕಾರಣ ಶವ ಸಂಸ್ಕಾರಕ್ಕೆ ಹಳೆಕುಂದುವಾಡ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಇದರಿಂದ ಅಸಮಾಧಾನಗೊಂಡ ಗ್ರಾಮಸ್ಥರು ಸ್ಮಶಾನಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಹಶೀಲ್ದಾರ್‌ ಹಾಗೂ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿದರು.

‘ಗ್ರಾಮದಲ್ಲಿ ಸ್ಮಶಾನಕ್ಕಾಗಿ 3.30 ಎಕರೆ ಸ್ಥಳ ಗುರುತಿಸಲಾಗಿದೆ. ಅದಕ್ಕೆ ಒಪ್ಪಿಗೆ ನೀಡಿ ಗ್ರಾಮಕ್ಕೆ ಸ್ಮಶಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಚಿವರು, ಶಾಸಕರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಗ್ರಾಮದ ಮುಖಂಡ ಮಹೇಶಪ್ಪ ದೂರಿದರು. ‘ನಮ್ಮ ಗ್ರಾಮದಲ್ಲಿ ಸ್ಮಶಾನ ಇಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಕ್ರಮ ಕೈಗೊಳ್ಳುತ್ತಿಲ್ಲ. ಶೀಘ್ರ ಸ್ಮಶಾನ ಮಂಜೂರು ಮಾಡಬೇಕು’ ಎಂದು ಗ್ರಾಮದ ಎ. ಶಿವಕುಮಾರ್ ಒತ್ತಾಯಿಸಿದರು.

‘ಕುಂದುವಾಡ ಗ್ರಾಮಕ್ಕೆ ಈಗಾಗಲೇ 3 ಎಕರೆ ಸ್ಮಶಾನ ಇದೆ. ಗ್ರಾಮಸ್ಥರು ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಇನ್ನೊಂದು ಇಲಾಖೆಯ ಅನುಮತಿ ಬೇಕಿದೆ. ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಅಂತ್ಯಸಂಸ್ಕಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಎಚ್ಚರಿಸಿದರು. ನಂತರ ಹಳೆ ಕುಂದವಾಡ ರುದ್ರ ಭೂಮಿಯಲ್ಲಿ  ಅಂತ್ಯಕ್ರಿಯೆ ನೆರವೇರಿಸಿದರು.

error: Content is protected !!