ಮೊಹರಂ : ಶಾಂತಿಗೆ ಭಂಗ ಬರದಂತೆ ಆಚರಿಸಲು ಕರೆ

ಮೊಹರಂ : ಶಾಂತಿಗೆ ಭಂಗ ಬರದಂತೆ ಆಚರಿಸಲು ಕರೆ

ಹರಿಹರದ ಸೌಹಾರ್ದ ಸಭೆಯಲ್ಲಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಡಿವೈಎಸ್ಪಿ ಬಸವರಾಜ್

ಹರಿಹರ, ಜು.10-  ಮೊಹರಂ ಹಬ್ಬವನ್ನು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಎಲ್ಲರೂ ಒಗ್ಗೂಡಿಕೊಂಡು ಆಚರಿಸುವಂತೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಡಿವೈಎಸ್ಪಿ ಜಿ.ಎಸ್. ಬಸವರಾಜ್ ಕರೆ ನೀಡಿದರು.

ನಗರದ ವೃತ್ತ ನಿರೀಕ್ಷಕರ ಸಭಾಂಗಣದಲ್ಲಿ ಮೊಹರಂ ಹಬ್ಬದ ನಿಮ್ಮಿತ್ತವಾಗಿ ಇಂದು ನಡೆದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಅನೇಕ  ಮಹಾತ್ಮರು ಗಣೇಶ ಚತುರ್ಥಿ, ರಂಜಾನ್, ಈದ್ ಮೀಲಾದ್, ಕ್ರಿಸ್ ಮಸ್ ಸೇರಿದಂತೆ ಹಲವಾರು ಹಬ್ಬಗಳನ್ನು ಜಾತಿ, ಭೇದ ಹಾಗೂ ವರ್ಗ, ಭೇದ ಭಾವನೆಗಳಿಲ್ಲದೇ ಎಲ್ಲರೂ ಒಂದಾಗಿ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಆ ದೃಷ್ಟಿಯಿಂದ ಕ್ರಾಂತಿಯ ವಿಚಾರಕ್ಕೆ ಯಾವುದೇ ರೀತಿಯ ಮಾನ್ಯತೆಯನ್ನು ನೀಡದೆ ಶಾಂತಿಯುತವಾಗಿ ಎಲ್ಲಾ ವರ್ಗದವರು ಹಬ್ಬಗಳನ್ನು ಆಚರಣೆ ಮಾಡಿದ್ದಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗಕ್ಕೆ ಗೌರವ ನೀಡಿದಂತಾಗುತ್ತದೆ. ಜೊತೆಗೆ, ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವುದಕ್ಕೆ ದಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

ತ್ಯಾಗ, ಬಲಿದಾನದ ಮೊಹರಂ ಹಬ್ಬವನ್ನು   ಮುಸ್ಲಿಂ ಸಮುದಾಯದವರು ಮಾತ್ರ ಆಚರಣೆ ಮಾಡದೇ ರಾಜ್ಯದ ಅನೇಕ ಭಾಗದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಜೊತೆಯಲ್ಲಿ  ಆಚರಿಸುತ್ತಾರೆ. ಈ ಪದ್ದತಿ ಪೂರ್ವಜರ ಕಾಲ ದಿಂದಲೂ ನಡೆದುಕೊಂಡು ಬಂದಿದ್ದು, ಇಂದಿನ ಯುವಕರೂ ಸಹ ಅದನ್ನು ಪಾಲಿಸಿಕೊಂಡು ಹೋದಾಗ ದೇಶದಲ್ಲಿ ಸಾಮರಸ್ಯ ಭಾವನೆಗಳು ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ ಎಂದರು.

ಪೊಲೀಸ್ ಇಲಾಖೆ ಜನರಿಗೆ ದಂಡ ಹಾಕಿ ರೆವಿನ್ಯೂ ಹೆಚ್ಚು ಮಾಡಬೇಕು ಎಂಬ ಉದ್ದೇಶ ಇರುವುದಿಲ್ಲ. ಪೊಲೀಸ್ ಇಲಾಖೆಯ ಉದ್ದೇಶ ಜನರು ನೆಮ್ಮದಿಯ ಜೀವನ ನಡೆಸಬೇಕು ಎಂಬ ಮನದಾಸೆಯನ್ನು ಹೊಂದಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಇಲ್ಲದೇ ಇರೋದರಿಂದ ಅಡ್ಡ ದಾರಿಯನ್ನು ಹಿಡಿಯುವುದು ಸಹಜವಾಗಿದೆ. ಅದನ್ನು ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆ ಕೆಲವು ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಉಂಟಾಗುತ್ತದೆ. ಆದ್ದರಿಂದ ಅದಕ್ಕೆ ಅವಕಾಶವನ್ನು ಕೊಡದೆ ಕಾನೂನಿಗೆ ಎಲ್ಲರೂ ಗೌರವ ಕೊಡುವಂತೆ ಕಿವಿಮಾತು ಹೇಳಿದರು.

ಸಿಪಿಐ ಸುರೇಶ್ ಸರಗಿ ಮತ್ತು ಅಂಜುಮಾನ್ ಸಂಸ್ಥೆಯ ಸದಸ್ಯ ಫೈಯಾಜ್ ಸೇರಿದಂತೆ, ಇನ್ನಿತರರು ಮಾತನಾಡಿದರು. 

ಈ ಸಂದರ್ಭದಲ್ಲಿ ಗುತ್ತೂರು ಠಾಣೆಯ ಪಿಎಸ್ಐ ಮಂಜುನಾಥ್ ಕುಪೇಲೂರು, ನಗರ ಠಾಣೆಯ ಶ್ರೀಪತಿ ಅಗ್ನಿ, ವಿಜಯಕುಮಾರ್, ಎಎಸ್ಐ ಗಳಾದ ರಾಜಶೇಖರಯ್ಯ, ಮನಸೂರ ಆಹ್ಮದ್,   ಅಂಜುಮಾನ್ ಇಸ್ಲಾಮೀಯ ಸಂಸ್ಥೆಯ ಅಧ್ಯಕ್ಷ ಏಜಾಜ್ ಆಹ್ಮದ್, ಕಾರ್ಯದರ್ಶಿ ಆಸೀಪ್ ಜುನೇಧಿ, ಸದಸ್ಯ ಸನಾವುಲ್ಲಾ, ಸಾಬ್, ಮನಸೂರ ಮದ್ದಿ, ನಸ್ರೂಲ್ಲಾ, ಚಮನ್ ಸಾಬ್ ಮಲೆಬೆನ್ನೂರು, ಪೊಲೀಸ್ ಸಿಬ್ಬಂದಿಗಳಾದ ಅಂಜಾದ್, ಸತೀಶ್, ನಿಂಗರಾಜ್, ನಾಗರಾಜ್, ಕರಿಯಪ್ಪ, ಮರಳಸಿದ್ದಯ್ಯ, ಸಿದ್ದರಾಜ್, ಹೇಮಾ ನಾಯ್ಕ್, ತಿಪ್ಪೇಸ್ವಾಮಿ, ಸುನಿತಾ,  ಕಾಳಮ್ಮ ಸುಜಾತ, ಕವಿತಾ, ಇತರರು ಹಾಜರಿದ್ದರು.  

error: Content is protected !!