ಚನ್ನಗಿರಿ, ಜು.9- ತಾಲ್ಲೂಕಿನ ಕೆರೆಬಿಳಚಿ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿಯುತ ಶಾಲೆಗೆ ಶಾಸಕ ಬಸವರಾಜು ವಿ. ಶಿವಗಂಗಾ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರ ಬಡ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ತೆರೆದಿದ್ದು, ಯಾವುದೇ ಲೋಪವಾಗದಂತೆ ನೋಡಿ ಕೊಳ್ಳಬೇಕು ಎಂದು ತಾಕೀತು ಮಾಡಿದ ಶಾಸಕರು, ಇತ್ತೀಚೆಗೆ ಡೆಂಗ್ಯೂ ಪ್ರಕರಣ ಉಲ್ಬಣ ಗೊಳ್ಳುತ್ತಿದ್ದು, ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ ಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು.
ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಬೇಕು, ಸಮಯಕ್ಕೆ ಸರಿಯಾಗಿ ತರಗತಿಗಳು ನಡೆಯಬೇಕೆಂದು ಸೂಚಿಸಿದರು.
ಇನ್ನೂ ಅಡುಗೆ ವಿಚಾರದಲ್ಲಿ ಯಾವುದೇ ರಾಜೀ ಆಗುವುದಿಲ್ಲ, ಗುಣಮಟ್ಟದ ಆಹಾರ ನೀಡಬೇಕು, ಪ್ರತಿನಿತ್ಯ ತರಕಾರಿ ಖರೀದಿ ಮಾಡಬೇಕು, ಶೇಖರಣೆ ಮಾಡಿದ ಆಹಾರ ಪದಾರ್ಥಗಳನ್ನು ಸಮಯ ಮುಗಿದ ಮೇಲೆ ಬಳಸಬಾರದು ಎಂದು ತಿಳಿಸಿದರು.
ಆಹಾರ ಸಾಮಗ್ರಿ ಸರಬರಾಜು ಮಾಡಲು ಟೆಂಡರ್ ನೀಡಿದ್ದರೆ ಅಂತವರ ಮೇಲೆ ನಿಗಾ ಇಡಲಾಗುತ್ತದೆ, ಯಾವುದೇ ಮೋಸ, ಅನ್ಯಾಯ ಕಂಡು ಬಂದರೂ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಸತಿ ನಿಲಯದ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ಕಳೆದ ವರ್ಷ ಇದೇ ಶಾಲೆಗೆ ಶಾಸಕರು ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ವಸತಿ ಶಾಲೆ ಸಿಬ್ಬಂದಿಗೆ ಶಾಕ್ ನೀಡಿದ್ದಾರೆ. ಶಾಲೆಗೆ ಮಕ್ಕಳ ಪ್ರವೇಶದಲ್ಲಿ ಹೆಚ್ಚಳವಾಗಿದ್ದು, ಅಡುಗೆ ಮನೆ, ಶೌಚಾಲಯ, ಸ್ವಚ್ಛತೆಯನ್ನು ಕಾಪಾಡಿಕೊಂಡು ಹೋಗುವಂತೆ ಪ್ರಾಂಶುಪಾಲ ಎಸ್. ವೀರೇಶ್ ಅವರಿಗೆ ತಿಳಿಸಿದರು.