ಮ್ಯಾನ್‍ಹೋಲ್ ಬಾಯಿ ತೆರೆದು ರಸ್ತೆಯಲ್ಲಿ ಹರಿಯುತ್ತಿದ್ದರೂ ಗಮನಿಸದ ವಾರ್ಡ್ ಸದಸ್ಯ

ಮ್ಯಾನ್‍ಹೋಲ್ ಬಾಯಿ ತೆರೆದು ರಸ್ತೆಯಲ್ಲಿ ಹರಿಯುತ್ತಿದ್ದರೂ ಗಮನಿಸದ ವಾರ್ಡ್ ಸದಸ್ಯ

17ನೇ ವಾರ್ಡಿನ ಪಾಲಿಕೆ ಸದಸ್ಯ ಅಜಯ್ ಕುಮಾರ್ ವರ್ತನೆ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ, ಜು. 9 – ಮಹಾನಗರ ಪಾಲಿಕೆಯ 17ನೇ ವಾರ್ಡಿನ ಪಿ.ಜೆ. ಬಡಾವಣೆಯ ಸದಸ್ಯ ಬಿ.ಜಿ. ಅಜಯಕುಮಾರ್ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಪಿ.ಜೆ. ಬಡಾವಣೆಯ ನಾಗರಿಕರು ಮನವಿ ಮಾಡಿದ್ದಾರೆ.

ವಾರ್ಡ್‍ನಲ್ಲಿ ಸಾಕಷ್ಟು ತೊಂದರೆಗಳು ಇದ್ದರೂ ಸಹ ವರ್ಷಗಳ ಕಾಲ ಪಾಲಿಕೆ ಸದಸ್ಯರು ಬರದೇ ನಿರ್ಲಕ್ಷ್ಯ ವಹಿಸಿದ್ದಾರೆ. ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ. ಮಹಾನಗರ ಪಾಲಿಕೆಗೆ ವಾರ್ಡ್‌ ಸಮಸ್ಯೆಗಳ ಬಗ್ಗೆ ತಿಳಿಸಿದರೆ ಪಾಲಿಕೆ ಸದಸ್ಯರನ್ನು ಸಂಪರ್ಕಿಸುವಂತೆ ತಿಳಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.

ವಾರ್ಡ್‍ನ ಪ್ರಮುಖ ರಸ್ತೆ – ಪ್ರತಿನಿತ್ಯ ನೂರಾರು ಜನರು, ಶಾಲಾ ಮಕ್ಕಳು ಓಡಾಡುವ ಕಾನ್ವೆಂಟ್ ರಸ್ತೆಯಲ್ಲಿ ಕಳೆದ 3 ದಿನಗಳಿಂದ ಒಳಚರಂಡಿ ತುಂಬಿ ಹರಿಯುತ್ತಿದ್ದರೂ ಸಹ ಅಜಯಕುಮಾರ್ ಇತ್ತ ತಿರುಗಿ ನೋಡಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

ಪ್ರತಿನಿತ್ಯ ಸಾವಿರಾರು ಮಕ್ಕಳು ಓಡಾಡುವ ಈ ರಸ್ತೆಯಲ್ಲಿ ಹಾಗೂ ಪಿ.ಜೆ. ಬಡಾವಣೆಯಲ್ಲಿ ಆಸ್ಪತ್ರೆ ಮತ್ತು ಕ್ಲಿನಿಕ್‍ಗಳಿರುವುದರಿಂದ ಸಾವಿರಾರು ಜನ ಆಗಮಿಸಲಿದ್ದು, ಒಳಚರಂಡಿ ನೀರು ರಸ್ತೆಯಲ್ಲಿ ಹರಿಯುವುದರಿಂದ ಮಹಾಮಾರಿ ಡೆಂಗ್ಯೂ ಅಂತಹ ಸಾಕ್ರಾಮಿಕ ರೋಗಗಳಿಗೆ ಮಕ್ಕಳು ಬಲಿ ಆಗಲಿದ್ದಾರೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅಜಯಕುಮಾರ್ ಅವರು ಕಳೆದ 2-3 ವರ್ಷಗಳಿಂದ ವಾರ್ಡ್‍ನಲ್ಲಿ ಕಾಣಿಸದೇ ಇದ್ದು, ಅವರು ಪಾಲಿಕೆ ಸದಸ್ಯರು ಇದ್ದರೋ, ಇಲ್ಲವೋ ಎಂಬುದನ್ನು ಆಯುಕ್ತರು ಸ್ಪಷ್ಟನೆ ನೀಡಲಿ. ಇಲ್ಲವೇ ಸಾರ್ವಜನಿಕರ ಕೆಲಸ ಮಾಡದ ಅಜಯಕುಮಾರ್ ಅವರನ್ನು ಪಾಲಿಕೆ ಸದಸ್ಯ ಸ್ಥಾನದಿಂದ ವಜಾಗೊಳಿಸಲಿ ಎಂದು ನಾಗರಿಕರಾದ ಮಧು ಪವಾರ್, ವಾಟಾಳ್ ನಾಗರಾಜ್, ಪ್ರಭುಕುಮಾರ್, ಬುನಿಯನ್ ಭಾಸ್ಕರ್, ರಾಜು ಚೌಹಾಣ್, ಪರಸಪ್ಪ, ರೇವಣಪ್ಪ, ಸುರೇಶ್, ಕಿಶೋರ್ ಜೈನ್, ಗುರುರಾಜ್, ಅಶು ಸಾವನ್, ಪರಶುರಾಮ್, ಪ್ರದೀಪ್, ಗೀತಾ ಜಗದೀಶ್, ಪ್ರಿಯಾ, ಪ್ರೇಮಾ, ಲಲಿತಮ್ಮ, ಜಗದೀಶ್, ಗೋಪಾಲ್, ಶ್ರೀಕಾಂತ್ ಬಗೇರ ಇನ್ನು ಮುಂತಾದರು ಆಗ್ರಹಿಸಿದ್ದಾರೆ.

error: Content is protected !!