ಹರಿಹರ, ಜು.7- ಅಮರಾವತಿಯಿಂದ ಟಿಪ್ಪು ನಗರಕ್ಕೆ ಹೋಗುವ ಮಾರ್ಗದಲ್ಲಿ ಭೂತೆ ಬಡಾವಣೆ ಇದೆ. ಈ ಭಾಗದಲ್ಲಿ ರಸ್ತೆಯ ಅವ್ಯವಸ್ಥೆ ಹೇಳತೀರದು. ಚುನಾವಣೆ ಬಂದಾಗ ಇನ್ನೇನು ಉತ್ತಮ ರಸ್ತೆ ಮತ್ತು ಎರಡೂ ಬದಿ ಚರಂಡಿ ಆಗುತ್ತದೆ ಎಂದು ನಾಗರಿಕರು ಸಂತಸ ಹೊಂದಿದ್ದರು. ಆದರೆ ಈಗ ರಸ್ತೆ ಕಾಮಗಾರಿ ನಿಲ್ಲಿಸಲಾಗಿದೆ. ಗುತ್ತಿಗೆದಾರರು ಮತ್ತು ನಗರಸಭೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಮಳೆಗಾಲ ಆರಂಭವಾಗಿದೆ. ಮಳೆ ಬಂತೆಂದರೆ ಸಾಕು ರಸ್ತೆ ಕೊಚ್ಚೆ ಗುಂಡಿಯಾಗುತ್ತದೆ. ರಸ್ತೆಯಲ್ಲಿ ನಡೆದಾಡಲು ಹರಸಾಹಸ ಪಡಬೇಕಿದೆ. ಅನೇಕರು ರಸ್ತೆಯಲ್ಲಿ ಬಿದ್ದು ಅನಾಹುತಗಳಾಗಿವೆ. ನಾಗರಿಕರು ನಗರಸಭೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ನಗರಸಭೆಯ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಪಡಿಸಿ ಹಾಗೂ ರಸ್ತೆಯ ಎರಡೂ ಬದಿ ಚರಂಡಿಗಳನ್ನು ನಿರ್ಮಿಸಿ ಜನರಿಗೆ ಓಡಾಡಲು ಅನುಕೂಲ ಮಾಡಿ ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.