ಅಂತೂ ಬಂತು ಜಗಳೂರು ಕೆರೆಗೆ ನೀರು

ಅಂತೂ ಬಂತು ಜಗಳೂರು ಕೆರೆಗೆ ನೀರು

ಜಗಳೂರು, ಜು. 5 –  ತುಂಗಭದ್ರಾ ನದಿಯಿಂದ ಜಗಳೂರು ತಾಲ್ಲೂಕಿನ 47 ಕೆರೆ ಮತ್ತು ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಭಾಗವಾಗಿ ಇಂದು  ಜಗಳೂರು ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳಿಗೆ ತುಂಗಭದ್ರಾ ನದಿಯಿಂದ ಪೈಪ್‌ಲೈನ್ ಮೂಲಕ ನೀರು ಹರಿಸಲಾಯಿತು. ಜಗಳೂರು ಕೆರೆಗೆ ಇಂದು ನೀರು ಹರಿಯುವ ಸಂಭ್ರಮವನ್ನು ಸ್ಥಳೀಯರು, ಹೋರಾಟಗಾರರು, ಜನಪ್ರತಿನಿಧಿಗಳು, ನೋಡಿ ಸಂಭ್ರಮಿಸಿದರು.

 ಜಗಳೂರು ತಾಲ್ಲೂಕಿನ ಕೆರೆಗಳಿಗೆ  ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಏತ ನೀರಾವರಿ ಯೋಜನೆ 660.34 ಕೋಟಿ ರೂ ವೆಚ್ಚದಲ್ಲಿ  2019 ರಲ್ಲಿ ಆರಂಭಿಸಲಾಗಿತ್ತು. ಮಳೆಗಾಲದಲ್ಲಿ 1.37 ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡು ಹರಪನಹಳ್ಳಿ ಮತ್ತು ಜಗಳೂರು ತಾಲ್ಲೂಕಿನ 57 ಕೆರೆಗಳ ತುಂಬಿಸುವ ಯೋಜನೆ ಇದಾಗಿದೆ.

 ತುಂಗಭದ್ರಾ ನದಿಗೆ ದೀಟೂರು ಬಳಿ ನಿರ್ಮಿಸಿರುವ ಜಾಕ್ ವೆಲ್ ಹಾಗೂ ಅತಿ ಎತ್ತರದ ಬೆಟ್ಟದಲ್ಲಿ ನಿರ್ಮಿಸಲಾಗಿರುವ ನೀರು ವಿತರಣಾ ತೊಟ್ಟಿಯಿಂದ ಗುರುತ್ವಾಕರ್ಷಣೆಯ ಮೂಲಕ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆ ಈಗ ಅಂತಿಮ ಘಟ್ಟ ತಲುಪಿದೆ.

ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ತರಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಮನವಿಯ ಮೇರೆಗೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಯೋಜನೆಗೆ ಪ್ರಾಥಮಿಕ ಅನುದಾನ ಬಿಡುಗಡೆ ಮಾಡಿದ್ದರು.

ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಜನಪರ ಕಾಳಜಿ ಸರ್ಕಾರ ಮತ್ತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೇಲೆ ಸತತ ಒತ್ತಡ ಹಾಕಿ  ಬರಪೀಡಿತ ತಾಲ್ಲೂಕಿಗೆ ನೀರು ಹರಿಸುವಲ್ಲಿ ಮತ್ತು ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗಲು  ಶ್ರಮಿಸಿರುವುದು ತೆರೆದ ಸತ್ಯವಾಗಿದೆ.

 ಕಾಂಗ್ರೆಸ್ ಮತ್ತು ಬಿಜೆಪಿ  ಎರಡೂ ಸರ್ಕಾರಗಳು ಹಾಗೂ ಕ್ಷೇತ್ರದ ಮಾಜಿ ಶಾಸಕರು ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್ ಹಾಗೂ ಹಾಲಿ  ಶಾಸಕ ಬಿ. ದೇವೇಂದ್ರಪ್ಪ ಅವರ ಸತತ ಪ್ರಯತ್ನದ ಫಲವಾಗಿ ಯೋಜನೆಯ ಸಾಕಾರಗೊಂಡಂತಾಗಿದೆ. ಎಲ್ಲಾ 57 ಕೆರೆಗಳಿಗೆ ಸಮರ್ಪಕ ನೀರು ಹರಿಯುವ ಮೂಲಕ ಅಂತರ್ಜಲ ಅಭಿವೃದ್ಧಿಯಾಗಿ ಕ್ಷೇತ್ರದ ರೈತರಲ್ಲಿಯು  ಮುಖದಲ್ಲಿ ಮಂದಹಾಸ ಮೂಡಲಿ ಎಂಬುದು ತಾಲ್ಲೂಕಿನ ಜನರ ಆಶಯ ವಾಗಿದೆ.

error: Content is protected !!