ನವದೆಹಲಿ, ಜು. 2 – ದಶಕದ ಹಿಂದೆ ಇರಾಕ್ ಹಾಗೂ ಸಿರಿಯಾದಲ್ಲಿ ಖಿಲಾಫತ್ ಘೋಷಿಸಿದ್ದ ಐಸಿಸ್ ಉಗ್ರವಾದಿ ಸಂಘಟನೆ, ತನ್ನ ಸಾಕಷ್ಟು ಪ್ರಾಂತ್ಯಗಳನ್ನು ಕಳೆದುಕೊಂಡಿತ್ತು. ಆದರೆ, ಆಫ್ರಿಕಾದಲ್ಲಿ ತನ್ನ ಪ್ರಭಾವ ಹಾಗೂ ಬೆದರಿಕೆ ಮುಂದುವರೆಸಿದೆ.
2014ರಲ್ಲಿ ಐಸಿಸ್‌ನ ಅಬು ಬಕ್ರ್ ಅಲ್ – ಬಗ್ದಾದಿ ತನ್ನನ್ನು ಮುಸ್ಲಿಮರ ಖಲೀಫ್ ಎಂದು ಘೋಷಿಸಿಕೊಂಡಿದ್ದ. ಎಲ್ಲಾ ಮುಸ್ಲಿಮರ ಕಮಾಂಡರ್ ಎಂದೂ ಹೇಳಿಕೊಂಡಿದ್ದ.
ಈ ಘೋಷಣೆ ವಿಶ್ವಾದ್ಯಂತ ಬಿತ್ತರಗೊಂಡಿತ್ತು. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಜಿಹಾದಿಗಳು ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ) ಸೇರಿದ್ದರು. ಇದರ ಪರಿಣಾಮ ವಿಶ್ವದಾದ್ಯಂತ ಕಂಡು ಬಂದಿತ್ತು.
ಡಿಸೆಂಬರ್ 2015ರಲ್ಲಿ 85 ದೇಶಗಳ ಸುಮಾರು 30 ಸಾವಿರ ಉಗ್ರರು ಈ ಹೋರಾಟದಲ್ಲಿ ಸೇರ್ಪಡೆಯಾಗಿದ್ದರು. ಇವರು ಮಧ್ಯ ಪ್ರಾಚ್ಯ ಹಾಗೂ ಅರಬ್ ಅಷ್ಟೇ ಅಲ್ಲದೇ, ಯುರೋಪ್ ಒಕ್ಕೂಟ, ಅಮೆರಿಕ, ಆಸ್ಟ್ರೇಲಿಯ ಹಾಗೂ ತಜಕಿಸ್ತಾನದಂತಹ ದೇಶಗಳಿಂದಲೂ ಬಂದಿದ್ದರು.
ಈ ಹೋರಾಟಗಾರರಲ್ಲಿ ಆಫ್ರಿಕಾದವರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಸುಮಾರು 6 ಸಾವಿರ ಹೋರಾಟಗಾರರು ಮನೆಗೆ ಮರಳಲಿದ್ದಾರೆ ಎಂದು 2017ರಲ್ಲಿ ಆಫ್ರಿಕಾ ಒಕ್ಕೂಟ ಘೋಷಿಸಿತ್ತು. ಇರಾಕ್ ಹಾಗೂ ಸಿರಿಯಾದಲ್ಲಿ ಐಸಿಸ್ ಬೆಳವಣಿಗೆ ಕಂಡಿದ್ದು ಜಾಗತಿಕ ಉಗ್ರವಾದದಲ್ಲಿ ಗಮನಾರ್ಹ ಬದಲಾವಣೆ ಯಾಗಿತ್ತು. ಆದರೆ, ಈ ಗುಂಪು ಜಾಗತಿಕವಾಗಿ ಸಾಕಷ್ಟು ಒತ್ತಡ ಎದುರಿಸಿತ್ತು. 2019ರ ಅಕ್ಟೋಬರ್‌ನಲ್ಲಿ ಅಲ್ ಬಗ್ದಾದಿ ಸಾವನ್ನಪ್ಪುವುದರೊಂದಿಗೆ ಹೋರಾಟ ಬಹುತೇಕ ಅಂತ್ಯವಾಗಿತ್ತು.
ನಂತರ ಐಸಿಸ್ ಸಂಘಟನೆ ತನ್ನ ತಂತ್ರಗಾರಿಕೆ ಬದಲಿಸಿಕೊಂಡಿದೆ. ಸೈದ್ಧಾಂತಿಕ ಪ್ರಚಾರ ಹಾಗೂ ಕಾರ್ಯಾಚರಣೆಯ ವಿಕೇಂದ್ರೀಕರಣದತ್ತ ಗಮನ ಹೆಚ್ಚಿಸಿದೆ. ಆಫ್ರಿಕಾ ಅದಕ್ಕೆ ಫಲವತ್ತಾದ ಭೂಮಿಯಂತೆ ದೊರೆತಿದೆ.
ಒಸಮಾ ಬಿನ್ ಲಾಡೆನ್‌ನಿಂದ ಹಿಡಿದು ಯೆಮನ್ ಜವಾಹಿರಿ, ಅಲ್ ಬಗ್ದಾದಿ ವರೆಗೆ ಉಗ್ರವಾದಿ ಸಿದ್ಧಾಂತದ ಪ್ರಮುಖರು ಆಫ್ರಿಕಾವನ್ನು ತಂತ್ರಗಾರಿಕೆಗೆ ಬಳಸಿಕೊಂಡಿದ್ದಾರೆ. ಅಲ್ ಬಗ್ದಾದಿ ಎರಡು ವರ್ಷಗಳ ಕಾಲ ಆಫ್ರಿಕಾದಲ್ಲಿ ಹೆಚ್ಚು ಬೇರು ಬಿಡಲು ಪ್ರಯತ್ನ ನಡೆಸಿದ್ದ.
ಲೆವಂಟ್‌ನಲ್ಲಿ ಐಸಿಸ್ ಉಗ್ರರು ಸೋತ ನಂತರ, ಆಫಿಕಾವೇ ಐಸಿಸ್‌ನ ಹೊಸ ನೆಲೆಯಾಗಲಿದೆ ಎಂದು ಹೇಳಲಾಗಿತ್ತು.
2021ರ ಸೆಪ್ಟೆಂಬರ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಆಫ್ರಿಕಾದ ಲಿಬ್ಯಾ, ಅಲ್ಜೀರಿಯ, ಸಿನಾಯ್, ಪಶ್ಚಿಮ ಆಫ್ರಿಕಾ, ಸೊಮಾಲಿಯ ಹಾಗೂ ಮಧ್ಯ ಆಫ್ರಿಕಾ ದೇಶಗಳಲ್ಲಿ ಹರಡಿಕೊಂಡಿದ್ದರು. ಆಫ್ರಿಕಾ ನೆಲೆಗಳಿಂದಾಗಿ ಐಸಿಸ್ ಒಂಭತ್ತು ವರ್ಷಗಳ ನಂತರವೂ ಉಳಿದುಕೊಳ್ಳಲು ಸಾಧ್ಯವಾಗಿದೆ. ಉಗ್ರವಾದಿ ಸಂಘಟನೆ ಕಾರಣದಿಂದ ಆಫ್ರಿಕಾದ ಭದ್ರತಾ ಪರಿಸ್ಥಿತಿ ಸಂಕೀರ್ಣವಾಗಿದೆ.
2010 ರಿಂದ 2017ರ ನಡುವೆ ಪಶ್ಚಿಮ ಆಫ್ರಿಕಾದ ಸಹೆಲ್‌ನಲ್ಲಿ ಬೋಕೋ ಹರಾಮ್, ಅನ್ಸಾರ್ ಡೈನ್, ಮುಜಾವೋ ಹಾಗೂ ಮೌರಬಿಟೌನ್ ಮುಂತಾದ ಇಸ್ಲಾಮಿಕ್ ಉಗ್ರವಾದಿ ಸಂಘಟನೆಗಳ ಬಗ್ಗೆ ಗಮನ ಹರಿಸಲಾಗುತ್ತಿತ್ತು.
ಐಸಿಸ್ ಈ ವಲಯದಲ್ಲಿ ಪ್ರಾಂತೀಯತೆಯನ್ನು ಹೆಚ್ಚಾಗಿ ಬಿತ್ತುತ್ತಿದೆ. ತನ್ನ ಹಲವು ಶಾಖೆಗಳ ಜಾಲವನ್ನು ಹರಡಿದೆ. ಹೀಗಾಗಿ ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಜಾಗತಿಕ ಹೋರಾಟ ನಡೆಸುತ್ತಿರುವವರು ಆಫ್ರಿಕಾ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.
ಆಫ್ರಿಕಾದಲ್ಲಿ ಹಿಂದಿನಿಂದಲೂ ತೀವ್ರವಾದಿ ಹೋರಾಟಗಳು ನಡೆದಿವೆ. ಸ್ಥಳೀಯ ಸಮಸ್ಯೆಗಳು ಹಾಗೂ ರಾಜಕೀಯ ಅಸ್ಥಿರತೆ ಐಸಿಸ್ ಬೇರು ಬಿಡಲು ನೆರವಾಗುತ್ತಿದೆ. ಆಫ್ರಿಕಾದ ಹಲವು ದೇಶಗಳಲ್ಲಿ ಜನರು ದಮನಿತರಾಗಿದ್ದಾರೆ, ಆರ್ಥಿಕವಾಗಿ ವಂಚಿತರಾಗಿದ್ದಾರೆ ಹಾಗೂ ಭ್ರಷ್ಟಾಚಾರದಿಂದ ಸಮಸ್ಯೆಗಳು ಹೆಚ್ಚಿವೆ. ರಾಜಕೀಯ ನಿಷ್ಕ್ರಿಯತೆ ಸಮಸ್ಯೆ ಇನ್ನಷ್ಟು ಉಲ್ಬಣಿಸುವಂತೆ ಮಾಡಿದೆ. ಇದು ತೀವ್ರವಾದ ಬೇರು ಬಿಡಲು ಫಲವತ್ತಾದ ಭೂಮಿ ಕೊಟ್ಟಿದೆ.
ಹೀಗಾಗಿಯೇ ನೈಜೀರಿಯಾಗೆ ಹೋಲಿಸಿದರೆ ಪಶ್ಚಿಮ ಆಫ್ರಿಕಾ ಪ್ರಾಂತ್ಯದಲ್ಲಿ ಐಸಿಸ್‌ನ ಐಸ್ವಾಪ್ ಸಂಘಟನೆ ಹೆಚ್ಚು ಪ್ರಭಾವಿಯಾಗಿದೆ. ರಾಜಕೀಯ ಅಸ್ಥಿರತೆ ಇರುವ ದೇಶಗಳಲ್ಲೇ ಐಸಿಸ್ ನೆಲೆ ಕಂಡುಕೊಳ್ಳಲು ಸಾಧ್ಯವಾಗಿದೆ.
2011ರಲ್ಲಿ ನ್ಯಾಟೋ ಮಧ್ಯಪ್ರವೇಶದಿಂದ ಲಿಬ್ಯಾದಲ್ಲಿ ಮೊಹಮ್ಮದ್ ಗಡಾಫಿ ಪದಚ್ಯುತಿಯಾಗಿತ್ತು. ನಂತರದಲ್ಲಿ ನಾಯಕತ್ವದ ಕೊರತೆಯಾಗಿತ್ತು. ಇದು ಐಸಿಸ್ ಉಗ್ರರಿಗೆ ಅನುಕೂಲ ಮಾಡಿಕೊಟ್ಟಿತ್ತು.
ಉಗ್ರವಾದದ ವಿರುದ್ಧ ಹೋರಾಟ ನಡೆಸುವಲ್ಲಿ ಆಫ್ರಿಕಾದ ಹಲವು ನಾಯಕರ ವಿಶ್ವಾಸ ಗಳಿಸುವಲ್ಲಿ ಪಶ್ಚಿಮದ ದೇಶಗಳು ಹೆಣಗಾಡುತ್ತಿವೆ. ಆಫ್ರಿಕಾದಾದ್ಯಂತ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ. ಇದು ಹಿಂಸಾಚಾರ ಮತ್ತು ತೀವ್ರವಾದದ ಅಪಾಯ ಹೆಚ್ಚಿಸಿದೆ.
ತೀವ್ರವಾದಕ್ಕೆ ಕಾರಣವಾಗುತ್ತಿರುವ ಅಂಶಗಳಿಗೆ ಪರಿಹಾರ ಕಂಡುಕೊಳ್ಳುವುದರಿಂದ ಮಾತ್ರ ಐಸಿಸ್ ಅಷ್ಟೇ ಅಲ್ಲದೇ ಉಳಿದ ತೀವ್ರವಾದಿ ಸಂಘಟನೆಗಳಿಂದಲೂ ಜನರ ರಕ್ಷಣೆ ಸಾಧ್ಯವಾಗಲಿದೆ. ಇದಕ್ಕಾಗಿ ಪ್ರಾಂತೀಯ ಸಹಕಾರ ಹೆಚ್ಚಿಸಬೇಕಿದೆ ಹಾಗೂ ಆರ್ಥಿಕ – ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಬೇಕಿದೆ ಎಂದು ಪರಿಣಿತರು ಅಭಿಪ್ರಾಯ ಪಡುತ್ತಾರೆ.