ಭರಮಸಾಗರ, ಜೂ.30- ಅಲ್ಪಸಂಖ್ಯಾತರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಉದಾಸೀನ ಮಾಡದೇ ಸರ್ಕಾರ ಒದಗಿಸಿದ ಸೌಲಭ್ಯವನ್ನು ತಪ್ಪದೇ ಬಳಸಿಕೊಳ್ಳಬೇಕೆಂದು ಚಿತ್ರದುರ್ಗದ ಮೈನಾರಿಟಿ ಇಲಾಖೆಯ ಅಧಿಕಾರಿ ಕಾಂತರಾಜ್ ಹೇಳಿದರು.
ಇಲ್ಲಿನ ಮಸೀದಿಯ ಪ್ರಾರ್ಥನಾ ಸಭಾಂಗಣದಲ್ಲಿ ವಕ್ಫ್ ಬೋರ್ಡ್ ಅಲ್ಪಸಂಖ್ಯಾತ ಇಲಾಖೆಯಿಂದ ದೊರೆಯುವ ಸೌಲಭ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುಸ್ಲಿಂ ಸಮಾಜದವರು ಸರ್ಕಾರದಿಂದ ಅನುಕೂಲ ಪಡೆಯಬೇಕೆಂದರೆ, ವಕ್ಫ್ ಬೋರ್ಡ್ ಹಾಗೂ ಸಂಬಂಧಪಟ್ಟ ಇಲಾಖೆಯಲ್ಲಿ ನೋಂದಣಿ ಕಡ್ಡಾಯ ಎಂದು ಹೇಳಿದರು.
ಚಿತ್ರದುರ್ಗ ವಕ್ಫ್ ಬೋರ್ಡಿನ ಸಲಹಾ ಸಮಿತಿಯ ಸದಸ್ಯ ಎಂ.ಸಿ. ಬಾಬು ಸಾಬ್ ಮಾತನಾಡಿ, ವಕ್ಫ್ ಬೋರ್ಡಿನಿಂದ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿ ವಿನಿಮಯ ಮಾಡಿದರು ಮತ್ತು ಹೆಚ್ಚು ಆಸ್ತಿ ಹೊಂದಿದ ಸಮಾಜ ಬಾಂಧವರು ದಾನ ನೀಡುವಂತೆ ಹೇಳಿದರು.
ಹಿರಿಯ ಪತ್ರಕರ್ತ ಬಿ.ಜೆ ಅನಂತಪದ್ಮನಾಭ ರಾವ್ ಮಾತನಾಡಿ, ಇಸ್ಲಾಂ ಸಮಾಜದವರು ದುಡಿಮೆ ಮಾಡುವುದರಲ್ಲಿ ಜಾಣರು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಕಮಿಟಿಯ ಮಹಮ್ಮದ್ ಸೈಫುಲ್ಲಾ, ಚಕ್ಕೆ ಬಶೀರ್ ಸಾಬ್, ಬುಡೇನ್ ಸಾಬ್, ನಯಾಜ್ ಅಹಮದ್ ಸಾಬ್, ಬಿ.ಕೆ. ಪರ್ವೀಸ್, ಅಲ್ಲಾಭಕ್ಷಿ ಮಾತನಾ ಡಿದರು. ಶಮೀಮ್ ಪಾಷಾ ಪ್ರಾಸ್ತಾವಿಕ ಮಾತನಾಡಿದರು. ಸಮಿತಿಯ ಕಾರ್ಯದರ್ಶಿ ಚಕ್ಕೆ ಸಮೀರ್ ವಂದಿಸಿದರು.