ಜಗಳೂರು ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿನ ‘ಖುಷ್ಕಿ ತೋಟಗಾರಿಕೆ’ ತರಬೇತಿ ಕಾರ್ಯಕ್ರಮದಲ್ಲಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ
ಜಗಳೂರು, ಜೂ.30- ಅಂತರ್ಜಲ ಕಡಿಮೆಯಿರುವ ಜಾಗದಲ್ಲಿ ಖುಷ್ಕಿ ತೋಟಗಾರಿಕೆ ವರದಾನವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಅಭಿಪ್ರಾಯಪಟ್ಟರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಐಸಿಎಆರ್-ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋದ ಆಶ್ರಯದಲ್ಲಿ ತಾಲ್ಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ನಡೆದ ‘ಖುಷ್ಕಿ ತೋಟಗಾರಿಕೆ’ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅತೀ ಕಡಿಮೆ ನೀರು ಬೇಕಾಗುವ ಬೆಳೆಗಳಾದ ಮಾವು, ಸೀಬೆ, ಸಪೋಟಾ, ತೆಂಗು ಬೆಳೆಗಳನ್ನು ಖುಷ್ಕಿ ಬೇಸಾಯದಲ್ಲಿ ಅಳವಡಿಸಿಕೊಂಡರೆ ಬರಗಾಲದಲ್ಲೂ ಆರ್ಥಿಕ ಸಬಲತೆ ಹೊಂದಬಹುದು ಎಂದರು.
ಜಗಳೂರಿನಲ್ಲಿ ಪ್ರಸ್ತುತ ಅಡಿಕೆ ಬೆಳೆಯ ವಿಸ್ತೀರ್ಣ ಹೆಚ್ಚಾಗುತ್ತಿರುವುದು ಆತಂಕದ ಸಂಗತಿಯಾಗಿದ್ದು, ಬೋರ್‍ವೆಲ್ ಆಶ್ರಯದಲ್ಲಿ ತೋಟ ನಿರ್ವಹಣೆ ಕಷ್ಟ ಸಾಧ್ಯ.
ಹಾಗಾಗಿ ರೈತರು ಅಡಿಕೆ ಬೆಳೆಗಷ್ಟೇ ಮಾರು ಹೋಗದೆ ಇತರೆ ಹಣ್ಣಿನ ಬೆಳೆ ಬೆಳೆಯಲು ಮನಸ್ಸು ಮಾಡಬೇಕೆಂದು ಕಿವಿಮಾತು ಹೇಳಿದರು.
ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಟಿ.ಜಿ. ಅವಿನಾಶ್ ಮಾತನಾಡಿ, ಪ್ರಸ್ತುತ ಮೆಕ್ಕೆಜೋಳ ಬೆಳೆಗೆ ಮಳೆ ಕೊರತೆಯಿಂದ ಲದ್ಧಿ ಹುಳದ ಬಾಧೆ ಅಲ್ಲಲ್ಲಿ ಕಂಡು ಬಂದಿದ್ದು, ಅದರ ನಿರ್ವಹಣೆಗೆ `ಇಮಾಮೆಕ್ಟಿನ್ ಬೆಂಜೋಯೇಟ್’ ಅನ್ನು ಪ್ರತಿ ಲೀಟರ್ ನೀರಿಗೆ 0.4ಗ್ರಾಂ ಬೆರೆಸಿ ಸಿಂಪಡಿಸಬೇಕೆಂದು ಸಲಹೆ ನೀಡಿದರು.
ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ದ 20 ಜನ ರೈತರಿಗೆ ಅರಸೀಕೆರೆ ಎತ್ತರದ ತೆಂಗಿನ ಸಸಿ ವಿತರಿಸಿದರು.
ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕೃಷ್ಣ ಮೂರ್ತಿ, ರೈತರಾದ ಶಶಿಧರ, ಮೇಘನಾಥ್, ಅಶೋಕ, ತಿಪ್ಪೇಸ್ವಾಮಿ ಮತ್ತು ಇತರರಿದ್ದರು.