ಕುಂಬಳೂರು : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವಸಂತ್ ದೇವಾಡಿಗ ಮನವಿ
ಮಲೇಬೆನ್ನೂರು, ಜೂ.28- ಮಾದಕ ದ್ರವ್ಯ ಸೇವನೆ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕೆಂದು ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮನವಿ ಮಾಡಿದರು.
ಅವರು, ಕುಂಬಳೂರು ಗ್ರಾಮದ ಬಸವ ಗುರುಕುಲದ ಶ್ರೀ ಶರಣ ಸಂಗಮ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ `ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ಸಂಕಲ್ಪ ಮಾಡಿದ್ದು, ಅದಕ್ಕಾಗಿ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಮತ್ತು ತಂಬಾಕು ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ದುಶ್ಚಟ ಗಳಿಗೆ ಒಳಗಾಗಿರುವ ತಂದೆ ಹಾಗೂ ಪೋಷಕರನ್ನು ಅದರಿಂದ ಹೊರತರುವ ಕೆಲಸವನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಅವರಿಗೆ ಆರೋಗ್ಯ ಭಾಗ್ಯ ನೀಡಬೇಕೆಂದರು.
ಸಂಪನ್ಮೂಲ ವ್ಯಕ್ತಿ ಹೆಚ್.ಎಂ.ಸದಾನಂದ್ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಡ್ರಗ್ಸ್ ಮಾರಾಟ ನಿಲ್ಲಬೇಕು. ಮಾದಕ ವಸ್ತುಗಳ ಸೇವನೆ ಜೀವಕ್ಕೆ ಮಾರಕ ಎಂದು ಎಚ್ಚರಿಸಿದರು.
ಶಾಲಾ ಮುಖ್ಯ ಶಿಕ್ಷಕ ಬಸವರಾಜ್ ಗುಂಡಣ್ಣನವರ್ ಮಾತನಾಡಿ, ತಂದೆ-ತಾಯಿಗಳ ಕುಡಿತದಿಂದ ಬೇಸತ್ತು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ ಘಟನೆಗಳ ಉದಾಹರಣೆ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್, ನಂದಿತಾವರೆ ಮೇಲ್ವಿಚಾರಕಿ ಸಂತೋಷಿನಿ, ಸೇವಾ ಪ್ರತಿನಿಧಿ ರೇಖಾ, ಶಿಕ್ಷಕರಾದ ಹೆಚ್.ಎಂ.ಪ್ರವೀಣ್, ಬಿ.ಜಿ.ಮನೋಹರ್, ಗಿರೀಶ್ ಗಂಟೇರ್, ಮಂಜುಳಾ, ಶಿಲ್ಪಾ, ಗದಿಗೆಪ್ಪ ಚಕ್ರಸಾಲಿ, ಎನ್.ವಿರೂಪಾಕ್ಷಪ್ಪ ಈ ವೇಳೆ ಇದ್ದರು.