ಉಕ್ರೇನ್ ಗಡಿ ನಗರಗಳ ನೆಲಸಮಕ್ಕೆ ಮುಂದಾದ ರಷ್ಯಾ

ಉಕ್ರೇನ್ ಗಡಿ ನಗರಗಳ ನೆಲಸಮಕ್ಕೆ ಮುಂದಾದ ರಷ್ಯಾ

ಖಾರ್ಕಿವ್, ಜೂ. 20 – ಸೋವಿಯತ್ ಕಾಲದ ಬಾಂಬ್‌ಗಳಲ್ಲಿ ಎಲೆಕ್ಟ್ರಾನಿಕ್ ಸುಧಾರಣೆ ತರುವ ಮೂಲಕ ಉಕ್ರೇನ್‌ನ ಗಡಿ ನಗರಗಳ ಮೇಲೆ ರಷ್ಯಾ ತೀವ್ರ ಬಾಂಬ್ ದಾಳಿ ನಡೆಸುತ್ತಿದೆ. ಇದರಿಂದಾಗಿ ನಗರಗಳು ನೆಲಸಮವಾಗುತ್ತಿವೆ.

ಖಾರ್ಕೀವ್, ಅವ್ಡಿವ್ಕ, ಚಾಸಿವ್ ಯಾರ್ ಹಾಗೂ ವೊವ್‌ಚಂಸ್ಕ್‌ ನಗರಗಳು ತೀವ್ರ ಬಾಂಬ್ ದಾಳಿಗೆ ಗುರಿಯಾಗುತ್ತಿವೆ. ರಷ್ಯಾ ಕಡಿಮೆ ವೆಚ್ಚದ ಹಾಗೂ ದೊಡ್ಡ ಪ್ರಮಾಣದ ಬಾಂಬ್‌ಗಳ ದಾಸ್ತಾನು ಹೊಂದಿರುವುದು ಸಮಸ್ಯೆಗೆ ಕಾರಣವಾಗುತ್ತಿದೆ.

ಖಾರ್ಕೀವ್ ನಗರವನ್ನು ಸಂಪೂರ್ಣ ನೆಲಸಮಗೊಳಿಸುವುದು ಹಾಗೂ ಅಲ್ಲಿ ಯಾರೊಬ್ಬರೂ ಉಳಿಯದಂತೆ ಮಾಡುವುದು ರಷ್ಯಾ ಉದ್ದೇಶವಾಗಿದೆ. ಅವರು ನಮ್ಮನ್ನು ಹೆದರಿಸಲು ಬಯಸಿದ್ದಾರೆ, ಆದರೆ ಅದರಲ್ಲಿ ನಾವು ಹೆದರುವುದಿಲ್ಲ ಎಂದು ಖಾರ್ಕೀವ್ ನಗರದ ನಿವಾಸಿ ಒಲೆಕ್ಸಾಂಡ್ರ್ ಲುಟ್ಸೆಂಕೊ ಹೇಳಿದ್ದಾರೆ.

ರಷ್ಯಾಗೆ ಖಾರ್ಕೀವ್‌ನಂತಹ ನಗರಗಳನ್ನು ವಶದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಇಲ್ಲ. ಹೀಗಾಗಿ ಅಲ್ಲಿನ ಜನತೆಯನ್ನು ಬಾಂಬ್‌ಗಳಿಂದ ಬೆದರಿಸಿ ಓಡಿಸಲು ರಷ್ಯಾ ಪ್ರಯತ್ನ ನಡೆಸಿದೆ ಎಂದು ಸೆಂಟರ್ ಫಾರ್ ಯುರೋಪಿಯನ್ ಪಾಲಿಸಿ ಅನಲೈಸಿಸ್‌ ಸಂಸ್ಥೆಯ ವಿಶ್ಲೇಷಕ ನಿಕೋ ಲಾಂಜೆ ಹೇಳಿದ್ದಾರೆ.

2024ರಲ್ಲಿ ಉಕ್ರೇನ್ ಗಡಿಯಂಚಿನಲ್ಲಿರುವ ನಗರಗಳ ವಿನಾಶಕ್ಕೆ ರಷ್ಯಾ ಬಾಂಬ್‌ಗಳ ಸುರಿಮಳೆಗರೆಯುತ್ತಿದೆ. ಇದಕ್ಕಾಗಿ ಗ್ಲೈಡ್ ಬಾಂಬ್ ಬಳಸುತ್ತಿದೆ ಹಾಗೂ ಏರ್‌ಸ್ಟ್ರಿಪ್‌ಗಳ ಜಾಲ ವಿಸ್ತರಿಸಿದೆ ಎಂಬುದು ಉಪಗ್ರಹ ಚಿತ್ರಗಳಿಂದ ಕಂಡು ಬಂದಿದೆ.

ರಷ್ಯಾ ಪ್ರತಿದಿನ ಉಕ್ರೇನ್ ವಿರುದ್ಧ 100 ಗೈಡೆಡ್ ಬಾಂಬ್‌ಗಳನ್ನು ಸಿಡಿಸುತ್ತಿದೆ. ಸೋವಿಯತ್ ಕಾಲದ ಸಾವಿರಾರು ಬಾಂಬ್‌ಗಳನ್ನು ಪರಿವರ್ತಿಸಿ ಈ ಬಾಂಬ್‌ಗಳನ್ನು ರೂಪಿಸಲಾಗಿದೆ. ಇವು 500 ರಿಂದ 3 ಸಾವಿರ ಕೆಜಿ ತೂಕದ ಸ್ಫೋಟಕ ಹೊಂದಿವೆ. ಪ್ರತಿ ಬಾಂಬ್ ವೆಚ್ಚ 20 ಸಾವಿರ ಡಾಲರ್ ಎಂದು ಅಂದಾಜಿಸಲಾಗಿದೆ.

ಬಖ್ಮುತ್ ನಗರವನ್ನು ನೆಲಮಸಗೊಳಿಸಲು ರಷ್ಯಾಗೆ ಒಂದು ವರ್ಷ ಅವಧಿ ಬೇಕಾಗಿತ್ತು. ನಂತರ ಕೆಲ ತಿಂಗಳಲ್ಲಿ ಅವ್ಡಿವ್ಕ ನಗರ ನೆಲಸಮಗೊಳಿಸಲಾಗಿತ್ತು. ಆದರೆ, ವೊವ್‌ಚಂಸ್ಕ್‌ ಮತ್ತು ಚಾಸಿವ್ ಯಾರ್ ನಗರಗಳ ನೆಲಸಮ ಕೆಲವು ವಾರಗಳಲ್ಲೇ ಪೂರ್ಣಗೊಳಿಸಲಾಗಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಈಗ ಉಕ್ರೇನ್‌ಗೆ 100 ಕಿ.ಮೀ. ದೂರದಲ್ಲಿ ರಷ್ಯಾ ಮತ್ತೊಂದು ಏರ್‌ಸ್ಟ್ರಿಪ್ ನಿರ್ಮಿಸುತ್ತಿದೆ. ರಷ್ಯಾ ಗಡಿಗಳ ಒಳಗಿನ ಹಲವು ನೆಲೆಗಳಿಂದ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಖಾರ್ಕೀವ್ ನಗರದ ಮೇಲಿನ ಗ್ಲೈಡ್ ಬಾಂಬ್‌ಗಳ ದಾಳಿ 50 ಪಟ್ಟು ಹೆಚ್ಚಾಗಿದೆ ಎಂದು ನಗರದ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್‌ಗೆ 100 ಕಿ.ಮೀ. ದೂರದಲ್ಲಿರುವ ರಷ್ಯಾದ ಎಂಟು ವಾಯುನೆಲೆಗಳನ್ನು ಬಳಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ರಷ್ಯಾದ ವಾಯುನೆಲೆಗಳ ಮೇಲೆ ದಾಳಿ ನಡೆಸುವುದರಿಂದ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ. ವಾಯುನೆಲೆಗಳನ್ನು ತಡೆದರೆ, ರಷ್ಯಾದ ವಿಮಾನಗಳು ಇನ್ನಷ್ಟು ಹಿಂದೆ ಸರಿಯಬೇಕಾಗುತ್ತದೆ ಎಂದು ಡಿಫೆನ್ಸ್ ಎಕ್ಸ್‌ಪ್ರೆಸ್ ಸಂಸ್ಥೆಯ ರಕ್ಷಣಾ ಪರಿಣಿತ ಒಲೆಹ್ ಕಟ್ಕೊವ್ ಹೇಳಿದ್ದಾರೆ.

ಪಶ್ಚಿಮದ ದೇಶಗಳು ಉಕ್ರೇನ್‌ಗೆ ಹಲವಾರು ಶಸ್ತ್ರಗಳನ್ನು ಪೂರೈಸಿವೆ. ಆದರೆ, ಈ ಶಸ್ತ್ರಗಳನ್ನು ರಷ್ಯಾದ ವಾಯುನೆಲೆಗಳ ವಿರುದ್ಧ ಬಳಸದಂತೆ ನಿರ್ಬಂಧಿಸಿವೆ. ಈ ವಾಯುನೆಲೆಗಳಲ್ಲೇ ರಷ್ಯಾ ಬಾಂಬ್‌ಗಳ ದಾಸ್ತಾನು ಮಾಡಿದೆ. ಇದು ಉಕ್ರೇನ್ ಅಧಿಕಾರಿಗಳಿಗೆ ಸಮಸ್ಯೆ ತಂದಿದೆ.

error: Content is protected !!