ದುಶ್ಚಟ ತ್ಯಜಿಸಿದರೆ ರೋಗಗಳಿಂದ ದೂರ

ದುಶ್ಚಟ ತ್ಯಜಿಸಿದರೆ ರೋಗಗಳಿಂದ ದೂರ

ಹರಿಹರದಲ್ಲಿ ನಡೆದ ತಂಬಾಕು ವಿರೋಧಿ ದಿನಾಚರಣೆಯಲ್ಲಿ ಡಾ.ಶ್ವೇತಾ ಈಶ್ವರ್

ಹರಿಹರ, ಜೂ. 11- ಸಾರ್ವಜನಿಕರು  ದುಶ್ಚಟಗಳನ್ನು ತ್ಯಜಿಸಿ, ಪುಸ್ತಕ ಓದುವುದು, ಕುಟುಂಬದ ಸದಸ್ಯರ ಜೊತೆಗೆ ಸಮಯ ಕಳೆಯುವ ಹವ್ಯಾಸ ಇಟ್ಟುಕೊಂಡರೆ ಮಾರಕ ರೋಗಗಳಿಂದ ದೂರ ಇರುವುದಕ್ಕೆ ಸಾಧ್ಯವಾಗುತ್ತದೆ ಎಂದು ಜಿಎಂಐಟಿ ಕಾಲೇಜಿನ ಉಪನ್ಯಾಸಕರಾದ ಡಾ. ಶ್ವೇತಾ ಈಶ್ವರ್ ಕತ್ತಲಗೆರೆ ಅಭಿಪ್ರಾಯಪಟ್ಟರು.

ಇಲ್ಲಿನ ಜೈ ಭೀಮ್ ನಗರದಲ್ಲಿ ಶ್ರೀ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿ ಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

ಸಿಗರೇಟು, ತಂಬಾಕು, ಗುಟ್ಕಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ  ಎಂದು ತಿಳಿದಿ ದ್ದರೂ  ಸಹ ಅವುಗಳನ್ನು ತ್ಯಜಿಸದೇ ಆರೋಗ್ಯ ವನ್ನು ಹಾಳು ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಸಾಗಿದೆ.    

ಸಾರ್ವಜನಿಕ ಸ್ಥಳಗಳಲ್ಲಿ,  ಕಾಲೇಜು ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಸಿಗರೇಟು, ತಂಬಾಕು  ಸೇವನೆ ನಿಷೇಧದ ನಾಮಫಲಕ ಅಳವಡಿಸಿ ಜಾಗೃತಿ ಮೂಡಿಸಿದರೂ   ಸಹ ವಿದ್ಯಾರ್ಥಿಗಳು ಹಾಗೂ ಜನರು ಮಾತ್ರ ತಮ್ಮ ಇಚ್ಛಾಶಕ್ತಿ ಅನುಸಾರವಾಗಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ತಂಬಾಕು ಬಳಕೆಯನ್ನು ಕೈ ಬಿಟ್ಟಾಗ ಮಾತ್ರ  ಆರೋಗ್ಯಕರ ಜೀವನ ನಡೆಸುವುದರ ಜೊತೆಗೆ ವಿಶ್ವ ತಂಬಾಕು ರಹಿತ ದಿನಾಚರಣೆಗೆ ಹೆಚ್ಚು ಮೌಲ್ಯ ಬರುತ್ತದೆ ಎಂದು ಹೇಳಿದರು. 

ತಂಬಾಕು ಸೇವನೆ ಮಾಡುವುದರಿಂದ ದೇಹದಲ್ಲಿ ಉಸಿರಾಟದ ತೊಂದರೆ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್, ದೃಷ್ಟಿ ಹೀನತೆ,  ಹಲ್ಲಿನ ಸಮಸ್ಯೆ, ಕಿಡ್ನಿ, ಯಕೃತ್, ಲಿವರ್ ತೊಂದರೆ, ಅಸ್ತಮಾ, ಶಕ್ತಿ ಹೀನತೆ ಸೇರಿದಂತೆ ಅನೇಕ ಕಾಯಿಲೆಗಳು ಉಂಟಾಗುತ್ತವೆ  ಇತ್ತೀಚಿನ ದಿನಗಳಲ್ಲಿ ತಂಬಾಕು,  ಗುಟ್ಕಾ ಸೇವನೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ   ಕಂಡುಬರುತ್ತಿದೆ. ಇದಕ್ಕೆ ಕಾರಣ ಪೋಷಕರು ಮಕ್ಕಳಿಂದಲೇ ತಂಬಾಕು ತರಿಸಿಕೊಂಡು ತಿನ್ನುವುದು  ಮತ್ತು ಟಿವಿ ವಾಹಿನಿಗಳಲ್ಲಿ ಬಿತ್ತರವಾಗುವ ಆಕರ್ಷಕ ಜಾಹೀರಾತುಗಳಿಂದಾಗಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಹೇಳಿದರು.

ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಯೋಜನಾ ಅಧಿಕಾರಿ ನಂದಿನಿ ಮಾತನಾಡಿ, ಅಜ್ಞಾನವೇ ಬಡತನಕ್ಕೆ ಮೂಲ ಕಾರಣ. ಹಾಗಾಗಿ ಸಾರ್ವಜನಿಕರು ಆರ್ಥಿಕ ಶಿಸ್ತು ಬೆಳೆಸಿಕೊಂಡರೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಿದೆ  ಎಂದು ಹೇಳಿದರು. 

ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಬಾಬಣ್ಣ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಾಗಿ ದುಶ್ಚಟಕ್ಕೆ ದಾಸರಾಗುತ್ತಿದ್ದು,  ಪೋಷಕರು  ಅದಕ್ಕೆ ಕಡಿವಾಣ ಹಾಕಬೇಕು  ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಕ್ಷ್ಮಣ, ಸುಮಂಗಳಾ, ವಿಠಲ್, ಸುಧಾ ಇತರರು ಹಾಜರಿದ್ದರು.

error: Content is protected !!