ಸಮಾಜದ ಶ್ರೇಯೋಭಿವೃದ್ಧಿಗೆ ಭಕ್ತರು ಕೈ ಜೋಡಿಸಿ

ಸಮಾಜದ ಶ್ರೇಯೋಭಿವೃದ್ಧಿಗೆ ಭಕ್ತರು ಕೈ ಜೋಡಿಸಿ

ಕುಂಚಿಟಿಗರ ಸರ್ವ ಸಮ್ಮೇಳನದಲ್ಲಿ ಡಾ. ಶಾಂತವೀರ ಶ್ರೀಗಳ ಆಶೀರ್ವಚನ

ಹೊನ್ನಾಳಿ, ಜೂ.11- ಕುಂಚಿಟಿಗ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸಮಾಜದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕೆಂದು ಹೊಸದುರ್ಗದ ಕುಂಚಗಿರಿಯ ಕಾಯಕ ಯೋಗಿ ಡಾ. ಶಾಂತವೀರ ಶ್ರೀಗಳು ಕರೆ ನೀಡಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಈಚೆಗೆ ನಡೆದ ಕುಂಚಿಟಿಗರ ಸರ್ವ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಸಮಾಜದ ಪ್ರಮುಖರ ನೇತೃತ್ವದಲ್ಲಿ  ಗೊಲ್ಲರಹಳ್ಳಿಯಲ್ಲಿ 2001ರಲ್ಲಿ ನಡೆದ ರಾಜ್ಯಮಟ್ಟದ ವಿಜಯರಾಯ ಸಂಗಮೇಶ್ವರ ಜಯಂತಿ ಅದ್ಧೂರಿಯಾಗಿ ಆಚರಿಸುವ ಮೂಲಕ ಸಮಾಜವನ್ನು ಸಂಘಟಿಸಿದ್ದರು ಎಂದು ಶ್ಲ್ಯಾಘಿಸಿದರು.

35 ಹಿಂದುಳಿದ ವರ್ಗಗಳ ಶ್ರೀಗಳೊಂದಿಗೆ ಅನ್ಯೋನ್ಯತೆ ಸಂಬಂಧ ಹೊಂದಿದ್ದು, ಸಮಾಜ ಬಾಂಧವರೂ ಸಹ ಇತರೆ ಸಮಾಜದವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.

ವಿಧಾನಸಭಾ ಚುನಾವಣೆಗೂ ಮುನ್ನ ಅಂದಿನ ಶಾಸಕರಾಗಿದ್ದ ಎಂ.ಪಿ. ರೇಣುಕಾಚಾರ್ಯರು ಕುಂಚಿಟಿಗ ಸಮುದಾಯ ಭವನಕ್ಕೆ ಸರ್ಕಾರದಿಂದ 2.50 ಕೋಟಿ ರೂ. ಮಂಜೂರಾಗಿದೆ ಎಂದಿದ್ದರು. ಆದರೆ ಅದು ಬಿಡುಗಡೆಯಾಗದೇ ಕಾಮಗಾರಿಯು ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಹೊನ್ನಾಳಿ-ಶಿವಮೊಗ್ಗ ರಸ್ತೆಯಲ್ಲಿ 4 ಎಕರೆ 20 ಗುಂಟೆ ಜಮೀನನ್ನು ಅತ್ಯಂತ ಕಡಿಮೆ ದರಕ್ಕೆ ನೀಡಿದ್ದು,  12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಮುದಾಯ ಭವನಕ್ಕೆ ಅನುದಾನ ಮಂಜೂರು ಮಾಡಿಸುವಂತೆ ಶಾಸಕರಿಗೆ ಮನವಿ ಮಾಡಿದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಕುಂಚಿಟಿಗ ಸಮಾಜದ ಋಣ ನನ್ನ ಮೇಲಿದ್ದು, ಸರ್ಕಾರದಿಂದ ಸಮಾಜದ ಕಾಮಗಾರಿಗಳಿಗೆ ಅನುದಾನ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಕುಂಚಿಟಿಗ ಮಹಾಸಭಾದ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ, ಸಮಾಜದ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ ಅವರು ಸಮಾಜದ ಕಾಮಗಾರಿಗಳಿಗೆ ಧನ ಸಹಾಯ ಮಾಡುವಂತೆ ಮನವಿ ಮಾಡಿದರು.

ಸಮಾಜದ ಕಾಮಗಾರಿಗಳಿಗೆ ಶಾಸಕರು ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುವಂತೆ ಮುಖಂಡ ತಕ್ಕನಹಳ್ಳಿ ಎಂ.ಎಚ್.ಸುರೇಶ್ ಒತ್ತಾಯಿಸಿದರು.

ಸಮಾಜದ ಮುಖಂಡರಾದ ಎನ್.ಎಚ್. ಹಾಲಪ್ಪ, ವರದರಾಜಪ್ಪ ಗೌಡ, ರಂಗನಗೌಡ, ಜೆ.ಕೆ.ಸುರೇಶ್, ಎಸ್.ಕೆ. ನರಸಿಂಹಮೂರ್ತಿ, ಜಿ.ಎಸ್. ತಿಮ್ಮಪ್ಪ, ಜಿ.ಎನ್. ರಂಗಪ್ಪ, ಷಣ್ಮುಖಪ್ಪ, ತಿಪ್ಪೇಸ್ವಾಮಿ, ಕೆ. ರಂಗನಾಥ್, ಬೇಲಿಮಲ್ಲೂರಿನ ರತ್ನಮ್ಮ, ಶಿವಪ್ರಸಾದ್, ಪ್ರಕಾಶ್, ರಮೇಶ್, ಸುರೇಶ್, ರಾಘವೇಂದ್ರ ಮತ್ತಿತರರಿದ್ದರು.

error: Content is protected !!