ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕೆ.ವಿ. ರವಿಕುಮಾರ್
ದಾವಣಗೆರೆ, ಜೂ.11- ಸ್ಥಳೀಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉತ್ತರ ವಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕೆ.ವಿ ರವಿಕುಮಾರ್ ಮಾತನಾಡಿ, ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ ಎಂದಿಗೂ ಫಲವನ್ನು ನೀಡುತ್ತದೆ. ದೇವನೂರು ಮಹಾದೇವ ಅವರ ಮಾತುಗಳನ್ನು ನೆನಪಿಸುವುದರ ಮೂಲಕ ಪ್ರಥಮ ಪಿಯುಸಿ ವಿದ್ಯಾರ್ಥಿ ಗಳನ್ನು ಕುರಿತು ಪೋಷಕರ ಕರ್ತವ್ಯಗಳಿಗೆ ಸಂಬಂಧಿಸಿದಂತೆ ವಿವರಿಸಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿ ಗುರಿ, ಉದ್ದೇಶಗಳು, ಹೇಗಿರುತ್ತವೆ ಎಂದು ನಿದರ್ಶನಗಳನ್ನು ನೀಡುವುದರ ಮೂಲಕ ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳು ಓದುವುದರಾಚೆಗೆ ಇರುವ ಮನಸ್ಥಿತಿಗಳು ಶುದ್ಧವಾಗಿದ್ದರೆ ಧನಾತ್ಮಕ ಚಿಂತನೆಗಳು ವಿದ್ಯಾರ್ಥಿಗಳ ಮನಸ್ಥಿತಿಯನ್ನು ರೂಪಿಸುತ್ತವೆ. ಗಳಿಸಿದ ಜ್ಞಾನ ವಿವೇಕವಾಗಬೇಕು ಎಂದು ಹೇಳುವುದರ ಜೊತೆಗೆ ವಿಜ್ಞಾನ ವಿಷಯ ಓದುವ ವಿದ್ಯಾರ್ಥಿಗಳ ಮನಸ್ಥಿತಿ, ಅಭಿರುಚಿಗಳು ಬದಲಾಗಬೇಕು ಎಂದು ವಿದ್ಯಾರ್ಥಿಗಳನ್ನು ಕುರಿತು ಹೇಳಿದರು. ದೃಶ್ಯಗಳ ಕಡೆಗೆ ಹೋಗುವ ಮನಸ್ಸನ್ನು ಅಕ್ಷರಗಳ ಕಡೆಗೆ ತಿರುಗಿಸುವ ಜವಬ್ದಾರಿ ಪೋಷಕರಲ್ಲಿದೆ ಎಂದು ಪೋಷಕ ವೃಂದಕ್ಕೆ ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಪೂಜಾ ಸಿ. ಜನ್ನು (ಲೀಡ್ ಇಂಜಿನಿಯರ್ ಇನ್ ಸೇಲ್ಸ್ ಪೋರ್ಸ್ ಟೆಕ್ನಾಲಜಿ, ಬೆಳಗಾವಿ) ಅವರು ತಮ್ಮ ವಿದ್ಯಾಭ್ಯಾಸದ ಜೀವನ ಕ್ಷಣಗಳನ್ನು ಹಂಚಿಕೊಳ್ಳುವುದರ ಮೂಲಕ ತಮ್ಮ ಪಿಯುಸಿ ದಿನಗಳನ್ನು ನೆನೆದು ಕಾಲೇಜಿನ ನೆನಪುಗಳು ಸದಾ ಕಾಲ ಜೊತೆಗಿರುತ್ತವೆ ಎಂದು ತಿಳಿಸಿದರು. ನಾವು ಬೆಳೆಯಬೇಕು ಇತರರು ಬೆಳೆಯುವುದಕ್ಕೆ ಸಹಾಯ ಮಾಡಬೇಕು. ಯಶಸ್ಸನ್ನು ಪಡೆಯಲು ಒಂದು ನಿರ್ದಿಷ್ಟ ಗುರಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲ ಪ್ರೊ. ಎಂ.ಪಿ. ರುದ್ರಪ್ಪ, ವಿದ್ಯಾರ್ಥಿಗಳು ಹದಿಹರೆಯದ ವಯಸ್ಸಿನವರು. ಅವರಿಗೆ ವಿಪರೀತ ಭಾವನೆಗಳು ಮತ್ತು ಅದರಲ್ಲಿ ಅನೇಕ ಏರಿಳಿತಗಳನ್ನು ತೋರಿಸುತ್ತಾರೆ. ಹಾಗಾಗಿ ತಂದೆ – ತಾಯಿಗಳು ಹಾಗೂ ಶಿಕ್ಷಕ ವೃಂದದವರು ಸೇರಿ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರನ್ನು ಉತ್ತಮ ಮೂರ್ತಿಗಳನ್ನು ಮಾಡುವ ಕರ್ತವ್ಯ ಎರಡೂ ವರ್ಗದವರಿಗೂ ಬಹು ಮುಖ್ಯವಾಗಿದೆ ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ದರ್ಶನ್ ಪ್ರಾರ್ಥಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಎಲ್.ಎಸ್. ಶರ್ಮಿಳ ಸ್ವಾಗತಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡುವುದರ ಜೊತೆಗೆ ಕಾರ್ಯಕ್ರಮವನ್ನು ಗಣಿತ ಉಪನ್ಯಾಸಕ ಕೆ.ಸಿ. ಶಿವಶಂಕರ್ ನಿರೂಪಿಸಿದರು. ಭೌತಶಾಸ್ತ್ರ ಉಪನ್ಯಾಸಕ ಉಮೇಶ್ ವಂದಿಸಿದರು.