ಸಾಣೇಹಳ್ಳಿಯಲ್ಲಿನ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ, ಜೂ. 2- ಬಸವಣ್ಣ ತನ್ನ ಅಕ್ಕನಿಗೆ ಜನಿವಾರ ಹಾಕಲು ಒಪ್ಪಲಿಲ್ಲ ಎಂಬುದನ್ನು ವಿರೋಧಿಸಿ, ಹೊರಬಂದು ಎಲ್ಲರಿಗೂ ಇಷ್ಟಲಿಂಗವನ್ನು ಕರುಣಿಸಿದರು. ಇಷ್ಟಲಿಂಗ ಕಟ್ಟಿಕೊಂಡವರು ಅದಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಜೀವನ ನಡೆಸಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಇಲ್ಲಿನ ಶ್ರೀಮಠದಲ್ಲಿ ನಡೆದ ಪ್ರತಿ ತಿಂಗಳ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಗುಡಿಯಲ್ಲಿರುವ ದೇವರು ಸ್ಥಾವರ ಒಂದೇ ಸ್ಥಳದಲ್ಲಿರುವಂಥದ್ದು. ಅದಕ್ಕೆ ಚಲನೆ, ಜೀವ ಇರುವುದಿಲ್ಲ. ಮಾತು ಬರೋದಿಲ್ಲ. ಇಷ್ಟಲಿಂಗ ನಮ್ಮ ಜೊತೆಯಲ್ಲಿಯೇ ಬರುವಂಥದ್ದು. ಅದಕ್ಕೆ ಚಲನೆ ಇರುತ್ತೆ. ಹೀಗೆ ಸ್ಥಾವರ ಲಿಂಗಕ್ಕೂ, ಇಷ್ಟಲಿಂಗಕ್ಕೂ ತುಂಬಾ ಅಂತರ ಇದೆ ಎಂದು ಹೇಳಿದರು.
ಸ್ಥಾವರ ಲಿಂಗವನ್ನು ಪೂಜೆ ಮಾಡುವಂಥವರು ಪೂಜಾರಿಗಳು. ಪೂಜಾರಿಗಳು ಪೂಜೆ ಮಾಡಿ ಅವರು ನಮಗೆ ತೀರ್ಥ, ಪ್ರಸಾದ ಕೊಡುವರು. ಇದನ್ನೇ ಶರಣರು ವಿರೋಧಿಸಿದರು. `ತನ್ನಾಶ್ರಯದ ರತಿಸುಖವ, ತಾನುಂಬ ಊಟವ ತಾ ಮಾಡಬೇಕಲ್ಲದೇ ಮತ್ತೊಬ್ಬರಿಂದ ಮಾಡಿಸಬಹುದೇ?’ ಎಂದು ಪ್ರಶ್ನಿಸಿ, ತನ್ನ ದೇವರನ್ನು ತಾನೇ ಮುಟ್ಟಿ ಪೂಜೆ ಮಾಡಬೇಕು ಎನ್ನುವ ಪದ್ಧತಿಯನ್ನು ಜಾರಿಗೆ ತಂದರು. ಈ ಪದ್ಧತಿಯನ್ನು ಜಾರಿಗೆ ತರುವ ಮುನ್ನ ಅನೇಕ ಧರ್ಮಗಳನ್ನು ಪರಿಶೀಲನೆ ಮಾಡಿದರು. ಆ ಧರ್ಮಗಳಲ್ಲಿನ ವಿಚಾರಗಳು ಜನರನ್ನು ದಿಕ್ಕುತಪ್ಪಿಸಿ ದಿಂಡುರುಳುವ ವಾತಾವರಣ ಇದ್ದದ್ದನ್ನು ಕಂಡು ಅಂಗೈಯೊಳಗೆ ಇಷ್ಟಲಿಂಗವನ್ನು ಬಸವಣ್ಣನವರು ಕರುಣಿಸಿ, ಇಷ್ಟಲಿಂಗದ ಜನಕರಾದರು ಎಂದು ವಿವರಿಸಿದರು.
ಲಿಂಗಾಯತ ಧರ್ಮದ ತತ್ವಗಳನ್ನು ಶರಣರು ಪ್ರತಿಪಾದಿಸಿದರು. ಅಷ್ಟಾವರಣ, ಪಂಚಾಚಾರ, ಷಟ್‌ಸ್ಥಲಗಳು ಇವು ಲಿಂಗಾಯತ ಧರ್ಮದ ಆಧಾರಸ್ಥಂಬಗಳು. ಗುರು ಎಂದರೆ ಅಜ್ಞಾನವನ್ನು ಕಳೆಯುವ ವ್ಯಕ್ತಿ. ಸರಿಯಾದ ಜ್ಞಾನ ಬಲ್ಲ ಶಕ್ತಿ. ಹೊರಗಿನ ಗುರು ಎಷ್ಟು ಮುಖ್ಯವೋ ಒಳಗಿನ ಗುರು ಅಷ್ಟೇ ಮುಖ್ಯ. ಅಂತರಂಗದಲ್ಲಿ ಗುರುವನ್ನು ಕಂಡುಕೊಂಡು ಅರಿವನ್ನಾಗಿ ಪಡೆದುಕೊಳ್ಳಬೇಕು. ಇಷ್ಟಲಿಂಗವನ್ನು ಭಾವಕ್ಕೆ ತೆಗೆದುಕೊಳ್ಳುವ ಮೂಲಕ ಪ್ರಾಣಕ್ಕೆ ತೆಗೆದುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು.
ಲಿಂಗದೀಕ್ಷೆ ಪಡೆದುಕೊಂಡ ನಂತರ ಯಾವುದೇ ಹೊರಗಿನ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವುದಿಲ್ಲ ಎನ್ನುವ ನಿಷ್ಠೆ, ನಿಯಮ, ಬದ್ಧತೆ ಪ್ರತಿಯೊಬ್ಬರಲ್ಲೂ ಇರಬೇಕು. ಜನರ ಸ್ವಭಾವ ಒಂದೊಂದು ಹಬ್ಬಕ್ಕೂ ಒಂದೊಂದು ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ. ಇದನ್ನೇ ಶರಣರು ಒಪ್ಪದೇ ವಿರೋಧಿಸಿದರು ಎಂದು ತಿಳಿಸಿದರು.