ದಾವಣಗೆರೆ, ಮೇ 28- ಚನ್ನಗಿರಿ ಪಟ್ಟಣದ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ವಾಹನಗಳ ಜಖಂ, ಪೊಲೀಸ್ ಸಿಬ್ಬಂದಿಗೆ ಗಾಯ ಸೇರಿದಂತೆ ಗಲಾಟೆ ನಡೆದಿರುವುದು ದುರಾದೃಷ್ಟಕರ. ಅದೇ ರೀತಿಯಲ್ಲಿ ಆದಿಲ್ ಸಾವಿಗೆ ನ್ಯಾಯ ಸಿಗಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಹಾಗೂ ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ. ಬಿ. ವಿನಯ್ ಕುಮಾರ್ ಒತ್ತಾಯಿಸಿದ್ದಾರೆ.
ಚನ್ನಗಿರಿ ಪಟ್ಟಣದ ಟಿಪ್ಪು ನಗರದಲ್ಲಿರುವ ಆದಿಲ್ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎಫ್ಐಆರ್ ದಾಖಲಿಸದೇ ಆದಿಲ್ ಅವರನ್ನು ಯಾಕೆ ವಶಕ್ಕೆ ಪಡೆಯಲಾಯಿತು ? ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಯಾಕೆ ಗಲಭೆ ನಿಯಂತ್ರಣ ಮಾಡಲು ಆಗಲಿಲ್ಲ? ಜೀಪ್ ಧ್ವಂಸ ಮಾಡಿದ್ದು, ಕಲ್ಲು ತೂರಾಟ ಮಾಡಿದ್ದು ಸರಿಯಲ್ಲ. ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದು ತಪ್ಪು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದರು.
ಅಮಾಯಕರನ್ನು ಯಾವುದೇ ಕಾರಣಕ್ಕೂ ಪೊಲೀಸರು ಬಂಧಿಸಬಾರದು. ಎಷ್ಟೋ ಜನರು ಗಲಾಟೆ ಆಗುತ್ತಿರುವಾಗ ನೋಡಲು ಬಂದಿರುತ್ತಾರೆ. ಪೊಲೀಸರು ಗಲಾಟೆಯಲ್ಲಿ ಭಾಗಿಯಾಗದವರನ್ನು ಆರೆಸ್ಟ್ ಮಾಡುವುದು ಸೂಕ್ತವಲ್ಲ. ಚನ್ನಗಿರಿ ಸಮೃದ್ಧಿ ತಾಣ. ಶಾಂತಿಯ ನೆಲವಾಗಿತ್ತು. ಆದರೆ, ಈ ಘಟನೆ ನಡೆದಿದ್ದು ಸರಿಯಲ್ಲ ಎಂದರು.
ಈ ಘಟನೆ ವೈಭವೀಕರಣ ಸರಿಯಲ್ಲ. ಸುಳ್ಳು ಸುದ್ದಿ ಬಗ್ಗೆ ಯಾರೂ ಕಿವಿಗೊಡಬಾರದು. ಲಾಕಪ್ ಡೆತ್ ಆಗಿದೆಯೋ, ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ತನಿಖೆಯಾದ ಬಳಿಕ ಸತ್ಯಾಂಶ ಹೊರಬರಲಿದೆ. ಸುಳ್ಳು ವದಂತಿ ಹರದಡಿದಾಗ ಜನರು ಆವೇಗ, ಆವೇಶಗೊಳ್ಳುವುದು ಸಹಜ. ಕಾನೂನು ಕೈಗೆ ತೆಗೆದುಕೊಂಡಿದ್ದು ತಪ್ಪು. ಇದನ್ನು ಸಮರ್ಥಿಸಿಕೊಳ್ಳಲು ಆಗದು ಎಂದು ವಿನಯ್ ಕುಮಾರ್ ಅಭಿಪ್ರಾಯಪಟ್ಟರು.
ಗಲಾಟೆ ಕುರಿತಂತೆ ಇಡೀ ಸಮುದಾಯ ವನ್ನೇ ಟಾರ್ಗೆಟ್ ಮಾಡುವುದು ಸರಿಯಲ್ಲ. ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪೊಲೀಸರ ಮೇಲೆ ಹೆಚ್ಚಿನ ಒತ್ತಡ ಇದ್ದಾಗ ಅಮಾಯಕರನ್ನು ಬಂಧಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ಆದಿಲ್ ಸಾವು ಹಾಗೂ ಪೊಲೀಸ್ ಠಾಣೆ ಮುಂದೆ ನಡೆದ ಅಹಿತಕರ ಘಟನೆಗಳ ಕುರಿತಂತೆ ಪಾರದರ್ಶಕ ತನಿಖೆ ನಡೆಯಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಕೆಲವರು ವಿನಾಕಾರಣ ಬಂಧಿಸುವ ಸಾಧ್ಯತೆ ಇರುವುದರಿಂದ ಮನೆ ಬಿಟ್ಟು ಹೋಗಿರುತ್ತಾರೆ. ಗಲಾಟೆ ಮಾಡಿರುವವರು ಮನೆ ಬಿಟ್ಟು ಹೋಗಿರುತ್ತಾರೆ. ಸಮಾಜದಲ್ಲಿ ಪೊಲೀಸರು ಸ್ನೇಹಿತರಂತೆ ಎಂದು ತಿಳಿಸಿದರು.