ರೈತರಿಂದ ವಿಚಾರವಂತಿಕೆಯ ಹೋರಾಟ ಅಗತ್ಯ

ರೈತರಿಂದ ವಿಚಾರವಂತಿಕೆಯ ಹೋರಾಟ ಅಗತ್ಯ

ರೈತರ ಸಭೆಯಲ್ಲಿ ಮುಖಂಡ ಕುರುಬೂರು ಶಾಂತಕುಮಾರ್

ದಾವಣಗೆರೆ, ಮೇ 28- ಬಗರ್‌ ಹುಕ್ಕುಂ ಸಾಗುವಳಿ ಪತ್ರ ವಿಳಂಬ, ಬರ ಪರಿಹಾರ ತಾರತಮ್ಯ ಸೇರಿದಂತೆ ಜಿಲ್ಲಾವಾರು ಸಮಸ್ಯೆಗಳನ್ನು ಕ್ರೋಢೀಕರಿಸಿ ರಾಜ್ಯಾದ್ಯಂತ ಹೋರಾಟ ನಡೆಸಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ನಿರ್ಧರಿಸಿದೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ನಡೆದ ಪ್ರಾಯೋಗಿಕ ಸಭೆಯಲ್ಲಿ ಚರ್ಚೆ ನಡೆಸಿದ ರೈತ ಮುಖಂಡರು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಭೆಗಳನ್ನು ನಡೆಸಿ, ಚರ್ಚಿಸಲು ನಿರ್ಧರಿಸಿದರು. ಇದರ ಅಂಗವಾಗಿ ಬರುವ ಜೂನ್ 10ರಂದು ಬೆಳಗಾವಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಯಿತು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ದೇಶದ ಬೆಳವಣಿಗೆ, ಕಾನೂನು, ಆಡಳಿತ ಹೀಗೆ  ಸಾಕಷ್ಟು ಬದಲಾವಣೆಗಳಾಗುತ್ತವೆ. ಈ  ಬದಲಾವಣೆ ಗಳನ್ನು ಅರಿತು ವಿಚಾರವಂತಿಕೆಯಿಂದ ಹೋರಾಟ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.

ರಾಜ್ಯದಲ್ಲಿನ 225 ಶಾಸಕರ ಪೈಕಿ 126 ಶಾಸಕರು ರೌಡಿ ಹಿನ್ನೆಲೆ ಉಳ್ಳವರು. ಅಂತವರನ್ನು ಗೆಲ್ಲಿಸಿ, ನಮಗೆ ಒಳ್ಳೆಯದಾ ಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ. ಇದರ ಬಗ್ಗೆ ರೈತರು ಗಂಭೀರ ವಾಗಿ ಚಿಂತಿಸುವ ಅಗತ್ಯವಿದೆ ಎಂದರು.

ರೈತರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಹಾಗೂ ಅಭಿವೃದ್ಧಿ ಕಾಣಲು ಸಾಧ್ಯ ಎಂದು ಶಾಂತಕುಮಾರ್ ಹೇಳಿದರು.

 80ರ ದಶಕದಲ್ಲಿ ರೈತರು ಪೊಲೀಸರಿಗೆ, ಗ್ರಾಮ ಲೆಕ್ಕಾಧಿಕಾರಿಗಳಿಗೆ, ಬ್ಯಾಂಕ್ ಅಧಿಕಾರಿಗಳಿಗೆ ಹೆದರುತ್ತಿದ್ದರು. ಸೊಸೈಟಿಯಲ್ಲಿ ಪಡೆದ ಸಾಲ ವಸೂಲಿಗೆ ಬಂದಾಗ ಮನೆ ಬಿಟ್ಟು ಹೋಡಿ ಹೋಗುತ್ತಿದ್ದ ಕಾಲವದು. 

ಆದರೆ ಈಗ ಅಂತಹ  ಪರಿಸ್ಥಿತಿ ಇಲ್ಲ. ಕಾಲ  ಬದಲಾಗಿದೆ. ಅಧಿಕಾರಿಗಳನ್ನು ಧೈರ್ಯವಾಗಿ ಪ್ರಶ್ನಿಸಿ ನ್ಯಾಯ ಕೇಳುವ ಹಂತದಲ್ಲಿ ರೈತರಿದ್ದಾರೆ. ಇದಕ್ಕೆ ಕಾರಣ ಪ್ರೊ. ನಂಜುಂಡಸ್ವಾಮಿ ಅವರು. ಅವರು ತಮ್ಮ ಕಾನೂನು ಪಾಂಡಿತ್ಯವನ್ನು ಧಾರೆ ಎರೆದು, ರೈತರಿಗಾಗಿ ಶ್ರಮಿಸಿದರು.

ವೈಯಕ್ತಿಕವಾಗಿ ಯಾವುದೇ ಆಸ್ತಿ ಮಾಡದೆ, ಸಂಘಟನೆಗಾಗಿ ಶ್ರಮಿಸಿದ್ದರು. ಈ ಕಾರಣದಿಂದಾಗಿಯೇ ಇಂದು ರೈತರು ತಮಗೆ ಅನ್ಯಾಯವಾದರೆ ಧೈರ್ಯವಾಗಿ ಪ್ರಶ್ನಿಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ನೂರಾರು ರೈತ ಸಂಘಟನೆಗಳಿವೆ. ಒಂದೊಂದು ಜಿಲ್ಲೆಯಲ್ಲೂ ಐದಾರು ರೈತ ಸಂಘಟನೆಗಳಿವೆ. ರೈತರು ಒಗ್ಗಟ್ಟಾದರೆ ತಮಗೆ ಕಷ್ಟ ಎಂದು ರಾಜಕಾರಣಿಗಳು ಸಂಘಟನೆಗಳನ್ನು ಒಡೆಯುವಲ್ಲಿ ಸಫಲರಾದರು. ಆದರೆ ಮುಂದೆಯೂ ಸಂಘಟನೆಗಳು ಒಗ್ಗಟ್ಟಾಗದಿದ್ದರೆ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಕ್ಕೂಟದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮಾತನಾಡಿ, ಹಲವಾರು ಜಿಲ್ಲೆಗಳಲ್ಲಿ ಬಗರ್ ಹುಕ್ಕುಂ, ಬರ ಪರಿಹಾರ ತಾರತಮ್ಯದ ಸಮಸ್ಯೆಗಳಿವೆ. ಪಂಪ್‌ಸೆಟ್ ಆಧಾರಿತ ಬೆಳೆಗಳಿಗೆ, ನೀರಾವರಿ ಹಾಗೂ ವರ್ಷದ ಬೆಳೆಗಳಿಗೆ ಪರಿಹಾರ ನೀಡಿಲ್ಲ. ಇಲ್ಲಿವರೆಗೆ 25 ಲಕ್ಷ ರೈತರಿಗೆ ಮಾತ್ರ ಪರಿಹಾರ ಸಿಕ್ಕಿದೆ. 30 ಲಕ್ಷ ರೈತರು ಪರಿಹಾರ ವಂಚಿತರಾಗಿದ್ದಾರೆ. ಆದರೆ ಅಧಿಕಾರಿಗಳು ಮಾನದಂಡದ ಸಬೂಬು ಹೇಳುತ್ತಿದ್ದಾರೆ ಎಂದರು.

ರಾಜ್ಯಾದ್ಯಂತ ಜಿಲ್ಲಾವಾರು ಸಮಸ್ಯೆಗಳನ್ನು ಅರಿಯಬೇಕಿದೆ. ಈ ಹಿನ್ನೆಲೆಯಲ್ಲಿ ಬೇರೆ ಜಿಲ್ಲೆಗಳಿಗೆ ಬಂದಾಗ ರೈತರು ಸಹಕರಿಸಿ, ಸ್ಥಳೀಯ ಸಮಸ್ಯೆಗಳನ್ನು ತಿಳಿಸಬೇಕು ಎಂದರು.

ಇದೇ ವೇಳೆ ಹಲವಾರು ವರ್ಷ ರೈತ ಸಂಘಟನೆಗಳಲ್ಲಿ ಶ್ರಮಿಸಿದ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಆವರಗೆರೆ ಬಸವರಾಜಪ್ಪ ಹಾಗೂ ರೈತ ಸಂಘದ ಕಾನೂನು  ಸಲಹೆಗಾರ ಎಲ್.ಹೆಚ್. ಅರುಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ನ್ಯಾಮತಿಯ ಕರಿಬಸಪ್ಪಗೌಡ ಅವರನ್ನು ಹಸಿರು ಸೇನೆ ರಾಜ್ಯಾಧ್ಯಕ್ಷ ರನ್ನಾಗಿ ಘೋಷಿಸಲಾಯಿತು. ರೈತ ಮುಖಂಡರಾದ ಮಾಧುವ ರೆಡ್ಡಿ, ಚನ್ನಪ್ಪ ಪೂಜಾರ್, ಪ್ರಸಾದ್ ರಾಜಯೋಗಿ, ತಿರುಮಲೇಶ್, ಅಶೋಕ್ ಮಾಯಕೊಂಡ, ಅಣಬೇರು ಕುಮಾರ ಸ್ವಾಮಿ, ಬಾಡ ಹನುಮಂತಪ್ಪ, ಶಿವಮೂರ್ತಪ್ಪ, ಬಸವರಾಜಪ್ಪ ಹರಿಹರ, ಉಮೇಶ್ ನ್ಯಾಮತಿ, ಲೋಕೇಶ್ ಗೌಡ್ರು, ರಾಂಪುರದ ಬಸವರಾಜ್ ಇತರರು ಸಭೆಯಲ್ಲಿದ್ದರು.

error: Content is protected !!