ಕೃಷಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಧರ್ಮಸ್ಥಳದ ಯೋಜನೆ

ಕೃಷಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಧರ್ಮಸ್ಥಳದ ಯೋಜನೆ

ಮಲೇಬೆನ್ನೂರು, ಮೇ 27- ಸಾಲಕೊಟ್ಟು ಮರುಪಾವತಿ ಮಾಡುವುದಷ್ಟೇ ಧರ್ಮಸ್ಥಳ ಯೋಜನೆಯ ಉದ್ದೇಶವಲ್ಲ. ಇದು ಜನರ ಅಭಿವೃದ್ಧಿಗಾಗಿ ಹುಟ್ಟಿ ಹಾಕಿದ ಯೋಜನೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಸ್ಪಷ್ಟಪಡಿಸಿದರು.

ಅವರು, ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ಮನೆಗೆ ಹಾನಿಯಾಗಿದ್ದ ಶ್ರೀಮತಿ ಮಂಜುಳಾ ಮಹೇಶ್ವರಪ್ಪ ಅವರಿಗೆ ಧರ್ಮಸ್ಥಳದಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿ ಕಳುಹಿಸಿದ 20 ಸಾವಿರ ರೂ.ಗಳ ಚೆಕ್ ಅನ್ನು ಸೋಮವಾರ ವಿತರಿಸಿ ಮಾತನಾಡಿದರು.

ಕೃಷಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವುದು ನಮ್ಮ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಗ್ರಾಮೀಣ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು ಅವರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದು ಹಾಗೂ ನಿರ್ಗತಿಕರಿಗೆ ಮಾಶಾಸನ, ಮನೆ ನಿರ್ಮಿಸಿ ಕೊಡುವುದೂ ಕೂಡಾ ನಮ್ಮ ಆದ್ಯತೆ ಆಗಿದೆ. ಕುಡಿತಕ್ಕೆ ಒಳಗಾಗಿರುವ ಜನರನ್ನು ಅದರಿಂದ ಹೊರತರುವ ಉದ್ದೇಶದಿಂದ ಮದ್ಯವರ್ಜನ ಶಿಬಿರಗಳ ಆಯೋಜನೆ ಮತ್ತು ವಿದ್ಯಾರ್ಥಿಗಳು, ಯುವಕರಲ್ಲಿ ಗುಟ್ಕಾ, ತಂಬಾಕು, ಸಿಗರೇಟ್ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಸಂಘಟನೆಯನ್ನೂ ಶಾಲಾ-ಕಾಲೇಜುಗಳಲ್ಲಿ ಮಾಡುತ್ತಾ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ  ವೀರೇಂದ್ರ ಹೆಗ್ಗಡೆ ಅವರು ಸಂಕಲ್ಪ ಮಾಡಿದ್ದಾರೆ ಎಂದು ವಸಂತ್ ತಿಳಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಬದಲಾವಣೆ ತರಲು ಶ್ರಮಿಸುತ್ತಿರುವ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ರಾಜ್ಯದ  ಜನತೆ ಕೈಜೋಡಿಸಬೇಕೆಂದರು.

ಜಿಗಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ರೂಪಾ ಸೋಮಶೇಖರ್, ಉಪಾಧ್ಯಕ್ಷ ಹೋಬಳಿ ಆನಂದಗೌಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಗ್ರಾಮದ ಮುಖಂಡರಾದ ಹೆಚ್.ಬಿ.ಶ್ರೀಕಾಂತ್, ಬಿ.ಕೆ.ಗದಿಗೆಪ್ಪ, ಮುದೇವಜ್ಜೇರ ಚಂದ್ರಪ್ಪ, ಮಡಿವಾಳರ ರಂಗಪ್ಪ, ಮಾದಣ್ಣರ ಮಂಜಪ್ಪ, ಬಿ.ಕೆ.ರವಿಗೌಡ, ಕೆ.ನಾಗರಾಜ್, ಒಕ್ಕೂಟದ ಅಧ್ಯಕ್ಷ ಎ.ಕೆ.ಸೋಮಶೇಖರ್, ಸೇವಾ ಪ್ರತಿನಿಧಿಗಳಾದ ಉಷಾ, ಶ್ವೇತಾ ಸೇರಿದಂತೆ ಮಹಿಳಾ ಸಂಘಗಳ ಸದಸ್ಯರು ಈ ವೇಳೆ ಹಾಜರಿದ್ದರು.

ಜಿಗಳಿ ವಲಯದ ಮೇಲ್ವೆಚಾರಕ ಹರೀಶ್ ಸ್ವಾಗತಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಪತ್ರಕರ್ತ ಜಿಗಳಿ ಪ್ರಕಾಶ್ ವಂದಿಸಿದರು.

error: Content is protected !!