ಜಿ.ಬೇವಿನಹಳ್ಳಿಯಲ್ಲಿ ಡೆಂಗ್ಯೂ ರೋಗ ಲಕ್ಷಣಗಳು : ಸರ್ವೇಗೆ ಸೂಚನೆ
ಮಲೇಬೆನ್ನೂರು, ಮೇ 27- ಎಲ್ಲೆಡೆ ಮುಂಗಾರು ಪೂರ್ವ ಮಳೆ ಆರಂಭವಾಗಿರು ವುದರಿಂದ ಡೆಂಗ್ಯೂ, ಚಿಕನ್ ಗುನ್ಯಾ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಪಟ್ಟಣದಲ್ಲಿ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈ ಕಗೊಳ್ಳಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಎ.ಸುರೇಶ್ ತಿಳಿಸಿದ್ದಾರೆ.
ಅವರು, ಸೋಮವಾರ ಪಟ್ಟಣದ ಗುಜರಿ ಅಂಗಡಿಗಳು ಮತ್ತು ಗ್ಯಾರೇಜ್ಗಳಿಗೆ ಭೇಟಿ ನೀಡಿ, ಟೈರ್, ಡ್ರಂ, ಬ್ಯಾರಲ್ಗಳಲ್ಲಿ ನೀರು ನಿಂತಿರುವುದನ್ನು ವೀಕ್ಷಿಸಿ, ಕೂಡಲೇ ತೆರವು ಮಾಡುವಂತೆ ನೋಟೀಸ್ ನೀಡಿದರು.
ಪಟ್ಟಣದಲ್ಲಿ ಸ್ವಚ್ಛತೆಗೆ ಒತ್ತು ನೀಡಲಾಗುವುದು. ಮನೆಯ ಸುತ್ತಲು ಪರಿಸರವನ್ನು ಸಾರ್ವಜನಿರಕು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಈ ಕುರಿತು ಜನರಿಗೆ ಆಡಿಯೋ ಮೂಲಕ ಜಾಗೃತಿ ಮೂಡಿಸಲಾವುದು. ಜೊತೆಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರ ಸಭೆ ನಡೆಸುವುದಾಗಿ ಮುಖ್ಯಾಧಿಕಾರಿ ಎ.ಸುರೇಶ್ `ಜನತಾವಾಣಿ’ಗೆ ಮಾಹಿತಿ ನೀಡಿದರು.
ಜಿ.ಬೇವಿನಹಳ್ಳಿಯಲ್ಲಿ ಡೆಂಗ್ಯೂ ? : ಜಿ.ಬೇವಿನಹಳ್ಳಿ ಗ್ರಾಮದಲ್ಲಿ ಡೆಂಗ್ಯೂ ರೋಗದ ಲಕ್ಷಣಗಳು ಜನರಲ್ಲಿ ಕಂಡು ಬರುತ್ತಿದ್ದು, ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ ಮಹಿಳೆಯೊಬ್ಬರಿಗೆ ಡೆಂಗ್ಯೂ ರೋಗದ ಲಕ್ಷಣಗಳಿದ್ದವು ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇದುವರೆಗೂ ಗ್ರಾಮದಲ್ಲಿ ಈ ಬಗ್ಗೆ ಸರ್ವೇ ಅಥವಾ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಅಥವಾ ಗ್ರಾ.ಪಂ. ಮಾಡಿಲ್ಲ ಎಂದು ಕೆಲವು ದೂರಿದ್ದಾರೆ.
ಡೆಂಗ್ಯೂ ರೋಗದ ಲಕ್ಷಣಗಳಿರುವವರು ಖಾಸಗಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸುವುದಕ್ಕಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕೆಂದು ತಾ.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ ಮನವಿ ಮಾಡಿದ್ದಾರೆ.
ಜಿ.ಬೇವಿನಹಳ್ಳಿಯಲ್ಲಿ ಡೆಂಗ್ಯೂ ರೋಗದ ಲಕ್ಷಣಗಳಿರುವ ಬಗ್ಗೆ ಕೊಕ್ಕನೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸರ್ವೇ ಮಾಡಿಸಲಾಗುವುದೆಂದರು.
ಸೂಚನೆ : ಮಲೇಬೆನ್ನೂರು ಪಟ್ಟಣದಲ್ಲಿ ಇದುವ ರೆಗೆ ಡೆಂಗ್ಯೂ, ಚಿಕನ್ ಗುನ್ಯಾ ರೋಗ ಲಕ್ಷಣಗಳು ಯಾವ ರೋಗಿಯಲ್ಲೂ ಕಂಡು ಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ನಿಗಾ ವಹಿಸುತ್ತೇವೆ ಎಂದು ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ತಿಳಿಸಿದರು.