ಬಾಳಿನ ಉನ್ನತಿಗೆ ಧರ್ಮಾಚರಣೆ ಅಗತ್ಯ

ಬಾಳಿನ ಉನ್ನತಿಗೆ ಧರ್ಮಾಚರಣೆ ಅಗತ್ಯ

ಹುಣ್ಣಿಮೆ ಧರ್ಮ ಜಾಗೃತಿ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು

ಬಾಳೆಹೊನ್ನೂರು,  ಮೇ 27-   ಬಾಳಿನ ಉನ್ನತಿಗೆ ಧರ್ಮಾಚರಣೆ ಅಗತ್ಯವಾಗಿ ಬೇಕಾಗಿದೆ. ಮನುಷ್ಯನಾಗಿ ಬಾಳುವುದು ಸಂಸ್ಕೃತಿಯ ಲಕ್ಷಣ. ಬಾಳು ಬೆಳಗಲು ಸಂಸ್ಕಾರ ಮತ್ತು ಸಂಸ್ಕೃತಿ ಅವಶ್ಯಕವೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯ ಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಣ್ಣಿಮೆ  ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡುತ್ತಿದ್ದರು.

ಮನುಷ್ಯ ಶ್ರೇಷ್ಠ ಮತ್ತು ಕನಿಷ್ಠ ಆಗುವುದು ನಡವಳಿಕೆಯಿಂದ ಎಂಬುದನ್ನು ಮರೆಯಬಾರದು. ಪ್ರಪಂಚದ ರೋಗಗಳಿಗೆಲ್ಲ ಔಷಧಿ ಇಲ್ಲದಿದ್ದರೂ ಮನದ ರೋಗಗಳಿಗೆಲ್ಲ ಔಷಧ ಇದ್ದೇ ಇದೆ. ಮನದ ರೋಗವೇ ಇತರ ರೋಗಗಳಿಗೆ ಮೂಲ. ಎಲ್ಲ ಕಾಲಕ್ಕೂ ಸತ್ಯ ಸತ್ಯವೇ. ಸುಳ್ಳು ಸುಳ್ಳೇ. ಸತ್ಯ ಕಾಣಲು ಸಮಯ, ಶ್ರಮ ಬೇಕಾಗುತ್ತದೆ. ನಡೆಯುವ ದಾರಿಯಲ್ಲಿ ತಾಕತ್ತು ಇದ್ದರೆ ತಡೆಯುವ ಶಕ್ತಿ ಯಾರಿಗೂ ಇರುವುದಿಲ್ಲ. ಮೂರ್ಖನ ಹೃದಯ ಅವನ ನಾಲಿಗೆಯಲ್ಲಿ ಇರುತ್ತದೆ. ವಿವೇಕಿಯ ನಾಲಿಗೆ ಅವನ ಹೃದಯದಲ್ಲಿ ಇರುತ್ತದೆ  ಎಂದು ಹೇಳಿದರು.

ಸಮಯ, ಸಂದರ್ಭಗಳು ಯಾವಾಗಲೂ ಬದಲಾಗುತ್ತಿರುತ್ತವೆ. ಆದರೆ ಒಳ್ಳೆಯ ಸಂಬಂಧಗಳು ಹಾಗೂ ನಿಜವಾದ ಸ್ನೇಹಿತರು ಎಂದೂ ಬದಲಾಗುವುದಿಲ್ಲ. ಇತಿಹಾಸ ನಿನ್ನೆ ಸುಖವಿತ್ತೆಂದು ಹೇಳುತ್ತದೆ. ವಿಜ್ಞಾನ ನಾಳೆ ಸುಖವಿರುವುದೆಂದು ಹೇಳುತ್ತದೆ.   ಸತ್ಯವಾದ ಮನಸ್ಸು ಹಾಗೂ ಸ್ವಚ್ಛವಾದ ಹೃದಯವಿದ್ದರೆ ನಿತ್ಯವೂ ಸುಖ ಇರುವುದೆಂದು ಭಾರತೀಯ ಧರ್ಮ, ತತ್ವಜ್ಞಾನ ಹೇಳುತ್ತದೆ. ಬದುಕು ಅನ್ನುವುದು ನದಿಯ ಕೊನೆಯಿಲ್ಲದ ಪಯಣ. ಯಾವುದೂ ನಮ್ಮ ಜೊತೆ ಉಳಿಯುವುದಿಲ್ಲ. ಉಳಿಯುವುದು ಒಂದೇ ಹೃದಯಕ್ಕೆ ತಟ್ಟಿದ ನೆನಪೆಂಬುದನ್ನು ತಿಳಿಯಬೇಕು ಎಂದು ವಿವರಿಸಿದರು.

ಸಮಾರಂಭದಲ್ಲಿ ಮಳಲಿಮಠದ ಡಾ.ನಾಗಭೂಷಣ ಶಿವಾಚಾರ್ಯರು, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯರು, ಹನುಮಾಪುರ ಹಿರೇಮಠದ ಡಾ.ಸೋಮ ಶೇಖರ ಶಿವಾಚಾರ್ಯರು, ಆಲೂರು ಹಿರೇ ಮಠದ ಶ್ರೀಗಳು, ವೀರೇಶ ಪಾಟೀಲ, ಮನು ಸಹೋದರರು ಭದ್ರಾವತಿ ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ಸಾಮೂಹಿಕ ಶಿವದೀಕ್ಷೆ ನೆರವೇರಿಸಲಾಯಿತು. ಆಗಮಿಸಿದ್ದ ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.

error: Content is protected !!