ಕೊಟ್ಟೂರು, ಮೇ 27 – ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸಲಿದೆ. ಅಲ್ಲದೆ, ಪಟ್ಟಣದ ಮಧ್ಯ ಭಾಗವಾಗಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವುದು ಅನಾರೋಗ್ಯದವರಿಗೆ ವೃದ್ಧರಿಗೆ ಮತ್ತು ಕಡುಬಡವರಿಗೆ ಅನುಕೂಲಕರ ವಾಗುತ್ತದೆ.
ಈ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದ್ದು, ನಿತ್ಯ ಕೂಲಿ ಕಾರ್ಮಿಕರಿಗೆ, ಸರ್ಕಾರಿ ಕಚೇರಿಗಳಿಗೆ ಕೆಲಸ, ಕಾರ್ಯಗಳಿಗೆ ಬರುವ ಗ್ರಾಮೀಣ ಪ್ರದೇಶದ ಜನರಿಗೂ ಇದರಿಂದ ಅನುಕೂಲವಾಗಲಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕಾಂಟೀನ್ ಹಲವು ವರ್ಷಗಳಿಂದ ಈ ತಾಲ್ಲೂಕಿನಲ್ಲಿ ಕನಸಾಗಿಯೇ ಉಳಿದಿತ್ತು. ಈಗಿನ ರಾಜ್ಯ ಸರ್ಕಾರ ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಬಡವರಿಗೆ, ಕಾರ್ಮಿಕರಿಗೆ ಅನುಕೂಲವಾಗಲಿದೆ.
ಇಷ್ಟೊತ್ತಿಗೆ ತಾಲ್ಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡು ಬಡವರ ಹಸಿವು ನೀಗಿಸಿ ಹೆಸರು ಪಡೆದುಕೊಳ್ಳುತ್ತಿತ್ತು.
ಕೇಂದ್ರೀಕೃತ ಟೆಂಡರ್ ಪದ್ಧತಿ ಪರಿಣಾಮವಾಗಿ ತಾಲ್ಲೂಕಿನ ಜನತೆಗೆ ಇಂದಿರಾ ಕ್ಯಾಂಟೀನ್ ಸ್ವಲ್ಪ ವಿಳಂಬವಾಗಿದೆ. ಬೆಂಗಳೂರಿನ ಚಿಪ್ಟನ್ ಕಂಪನಿ ಟೆಂಡರ್ ಪಡೆದಿದ್ದು, ಇಂದಿರಾ ಕ್ಯಾಂಟೀನ್ ಲೋಕಾರ್ಪಣೆಗೊಳ್ಳುತ್ತಿರುವುದು ತಾಲ್ಲೂಕಿನ ಜನತೆಯಲ್ಲಿ ಸಂತಸ ಉಂಟು ಮಾಡಿದೆ.
ಇಂದಿರಾ ಕ್ಯಾಂಟಿನ್ ಸರ್ಕಾರದ ಯೋಜನೆಯಡಿಯಲ್ಲಿ ಕಡು ಬಡವರಿಗೆ ಮತ್ತು ಚಿಕಿತ್ಸೆ ಕುರಿತು ಬರುವ ರೋಗಿಗಳಿಗೆ ಬೆಳಿಗ್ಗೆ, ಮಧ್ಯಾಹ್ನದ ಸಮಯದಲ್ಲಿ ಉಪಾಹಾರ ಮತ್ತು ಊಟ ಬಡವರಿಗೋಸ್ಕರ ಕಡಿಮೆ ದರದಲ್ಲಿ ದೊರೆಯುತ್ತದೆ. ಕಟ್ಟಡ ನಿರ್ಮಾಣ ಬೇಗ ಮುಗಿದ ನಂತರ ಶಾಸಕ ಕೆ.ನೇಮಿರಾಜ್ ನಾಯ್ಕ್ ಅವರಿಂದ ಉದ್ಘಾಟಿಸಲಾಗುವುದು ಎಂದು ತಹಶೀಲ್ದಾರ್ ಜಿ.ಕೆ. ಅಮರೇಶ್ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಇಂದಿರಾ ಕ್ಯಾಂಟೀನ್ಗಳು ನಿಧಾನವಾಗಿ ನಿಷ್ಫಲವಾಗತೊಡಗಿದವು. 2023 ರಲ್ಲಿ ಅಧಿಕಾರಕ್ಕೆ ಮರಳಿದ ನಂತರ, ಕ್ಯಾಂಟೀನ್ಗಳು ಪುನರುಜ್ಜೀವನಗೊಳ್ಳುತ್ತಿವೆ ಎಂದು ಕೆಪಿಸಿಸಿ ಸದಸ್ಯ ಗೂಳಿ ಮಲ್ಲಿಕಾರ್ಜುನ್ ತಿಳಿಸಿದರು.