ದಾವಣಗೆರೆ, ಮೇ 14 – ತಾಲ್ಲೂಕಿನ ಕುಕ್ಕುವಾಡ ಗ್ರಾಮದಲ್ಲಿರುವ ದಾವಣಗೆರೆ ಸಕ್ಕರೆ ಕಂಪನಿ ವ್ಯಾಪ್ತಿಯಲ್ಲಿ ನೂರಾರು ಎಕರೆಯಲ್ಲಿ ಬೆಳೆದಿರುವ ಕಬ್ಬು, ಅಡಿಕೆ, ತೆಂಗಿನ ತೋಟಗಳು ನೀರಿಲ್ಲದೆ ಬಿರು ಬೇಸಿಗೆಯಿಂದ ಒಣಗಿವೆ. ಇದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಸರ್ಕಾರ ಒಣಗಿರುವ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ.ಎಂ. ಸತೀಶ್ ಆಗ್ರಹಿಸಿದ್ದಾರೆ.
ಅವೈಜ್ಞಾನಿಕ ವೇಳಾಪಟ್ಟಿಯಿಂದ ಭದ್ರಾ ನೀರು ಹರಿಯದಿರುವುದು ಒಂದೆಡೆಯಾದರೆ, ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಿಸಿಲಿನ ಝಳಕ್ಕೆ ತತ್ತರಿಸುತ್ತಿರುವ ರೈತ, ಒಣಗಿರುವ ಬೆಳೆ ಕಂಡು ರೋಧಿಸುತ್ತಿದ್ದಾನೆ.
ಮಳೆ ಬರುತ್ತದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ನೋಡಿ ನೋಡಿ ರೈತ ಹೈರಾಣಾಗಿದ್ದಾನೆ. ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ.
ಕೊಳವೆ ಬಾವಿಗಳು ನೀರು ಇಲ್ಲದೆ ಬತ್ತಿ ಹೋಗಿವೆ. ಹೀಗಾಗಿ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗಿಲ್ಲ. ಇದರಿಂದ ಬೆಳೆ ಸಂಪೂರ್ಣ ಒಣಗಿ ಸುಟ್ಟಂತೆ ಕಾಣುತ್ತಿದೆ.
ಇತಿಹಾಸ ಕಂಡರಿಯದ ಭೀಕರ ಬರದಿಂದ ಜನರು ಕಂಗೆಟ್ಟಿದ್ದಾರೆ. ಆದ್ದರಿಂದ ರೈತರ ಇಂತಹ ಹೀನಾಯ ಪರಿಸ್ಥಿತಿಯನ್ನು ಸರ್ಕಾರ ಕಣ್ತೆರುದು ನೋಡಬೇಕು.
ರೈತರ ಜಮೀನುಗಳಿಗೆ ಭೇಟಿ ನೀಡಿ ಒಣಗಿರುವ ಮತ್ತು ಒಣಗುತ್ತಿರುವ ಬೆಳೆ ಸಮೀಕ್ಷೆ ನಡೆಸಿ, ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ನೀರಿಲ್ಲದೆ ಒಣಗಿರುವ ಕಬ್ಬಿನ ಬೆಳೆಯನ್ನು ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್, ಕನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಮ್ಮ ಸ್ವಾಮಿಲಿಂಗಪ್ಪ, ಕೊಳೇನಹಳ್ಳಿ ಕೆ. ಶರಣಪ್ಪ, ಎಸ್.ಸಿ. ಸಿದ್ದಪ್ಪ, ಮಂಜುನಾಥ ಗುತ್ನಾಳ, ದೊಡ್ಡಮನೆ ಹಾಲಸಿದ್ದಪ್ಪ, ಬಿ.ನಾಗೇಂದ್ರಪ್ಪ, ಕನಗೊಂಡನಹಳ್ಳಿ ಕೆ.ಎನ್. ಮಂಜುನಾಥ್ ಮುಂತಾದವರು ವೀಕ್ಷಣೆ ಮಾಡಿದರು.