ಸಾಣೇಹಳ್ಳಿ, ಮೇ 8- ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರದಿಂದ ದೂರವಿದ್ದು, ಪಾರದರ್ಶಕವಾಗಿ ಸದಾ ಕಾಯಕಶೀಲರಾಗಬೇಕೆಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಹೇಳಿದರು.
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಇತ್ತಿಚೇಗೆ ಆಯೋಜಿಸಿದ್ದ ಇಷ್ಟಲಿಂಗ ದೀಕ್ಷೆ ಸಂಸ್ಕಾರದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಬಸವಣ್ಣನವರು ಲಿಂಗಾಯತ ಧರ್ಮದ ಹುಟ್ಟಿಗೆ ಕಾರಣರಾದವರು. ಲಿಂಗಾಯತ ಧರ್ಮ ದಯಾ ಮೂಲವಾದುದು. ಈ ಧರ್ಮದಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಹೇಳಿದರು.
ಶ್ರೇಷ್ಟ ಎನ್ನುವುದು ಹುಟ್ಟಿನಿಂದ ಬಂದಿಲ್ಲ. ನಾವು ಮಾಡುವ ಕೆಲಸದಿಂದ ಬರುತ್ತೆ ಎಂದ ಅವರು, ಜನರಿಗೆ ಇಂದು ಗುಡಿಯ ಹುಚ್ಚು ಹೆಚ್ಚಿದೆ. ಆದರೆ ಗುರು ಬಸವರು ಗುಡಿ ಗುಂಡಾರಕ್ಕೆ ಒತ್ತುಕೊಡದೇ ದೇಹವನ್ನೇ ದೇವಾಲಯ ಮಾಡಿಕೊಂಡಿದ್ದರು ಎಂದರು.
ಗುರು ಬಸವರು ಇಷ್ಟಲಿಂಗದ ಮೂಲಕ ಸಮಾಜದಲ್ಲಿ ಸಮಾನತೆ ತಂದರು ಮತ್ತು ತಮ್ಮ ದೇಹವನ್ನೇ ದೇಗುಲವಾಗಿಸಿಕೊಂಡು ಶಿವ ಚೈತನ್ಯ ಪಡೆದುಕೊಂಡವರು. ಆದ್ದರಿಂದ ಶರಣರೂ ಸಹ ದೇವರ ಬಗ್ಗೆ ಇದ್ದ ಅಜ್ಞಾನ ತೊಲಗಿಸಿಕೊಂಡು, ಇಷ್ಟಲಿಂಗ ದೀಕ್ಷೆ ಕರುಣಿಸಿ ಸುಜ್ಞಾನ ಪಡೆದುಕೊಂಡರು ಎಂದು ತಿಳಿಸಿದರು.
ತಂದೆ-ತಾಯಿಯಿಂದ ನರ ಜನ್ಮ ಪಡೆದರೇ ಗುರುವಿನಿಂದ ಹರ ಜನ್ಮ ಪಡೆಯ ಬಹುದು. ಆದ್ದರಿಂದ ಪ್ರತಿಯೊಬ್ಬರು ಬಹಿರಂಗದ ಶುಚಿತ್ವಕ್ಕಿಂತ, ಅಂತರಂಗ ಶುಚಿತ್ವ ಕಾಪಾಡಿಕೊಳ್ಳಿ ಎಂದು ಹೇಳಿದರು.