ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ 12ರಂದು ಬೀಜ ವೈಭವ

ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ 12ರಂದು ಬೀಜ ವೈಭವ

ದಾವಣಗೆರೆ, ಮೇ 8 – ಬೀಜ ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ ಜೀವನಾಡಿ. ಸಾವಿರಾರು ವರ್ಷಗಳಿಂದ ಬೀಜ, ಕೃಷಿ ಬದುಕಿನ ಭಾಗವಾಗಿ, ಸಂಸ್ಕೃತಿಯ ಜೊತೆಯಾಗಿ ಬೆಸೆದುಕೊಂಡು ಬಂದಿದೆ. ರೈತರು ತಳಿ ವೈವಿಧ್ಯವನ್ನು ಅಭಿವೃದ್ಧಿ ಗೊಳಿಸಿ, ಕಾಪಾಡಿ, ಪೀಳಿಗೆಯಿಂದ ಪೀಳಿಗೆಗೆ ಸಾಗಿಸಿ ತಂದಿದ್ದಾರೆ. ಅಕ್ಕಡಿ, ನವಧಾನ್ಯದಂಥ ಹಲವು ವಿಶೇಷ ಪದ್ಧತಿಗಳ ಮೂಲಕ ಬೀಜ ವೈವಿಧ್ಯವನ್ನು ಜೀವಂತವಾಗಿ ಇರಿಸಿದ್ದಾರೆ.

ಒಕ್ಕಲು ಮಕ್ಕಳ ಜೀವಾಳವಾಗಿರುವ ಬೀಜ ವೈವಿಧ್ಯಕ್ಕೆ ಧಕ್ಕೆ ಬಂದೊದಗಿದ್ದು, ಪ್ರಸ್ತುತ ಎದುರಾಗಿರುವ ಕೃಷಿ ಬಿಕ್ಕಟ್ಟನ್ನು ಎದುರಿಸಲು ಸಾಂಪ್ರದಾಯಿಕ ತಳಿಗಳಿಗೆ ಆದ್ಯತೆ ನೀಡಬೇಕಿದೆ. ದೇಸಿಯ ಬೀಜ ವೈವಿಧ್ಯದ ಮಹತ್ವದ ಬಗ್ಗೆ  ರೈತರು ಮತ್ತು ಗ್ರಾಹಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಐಕಾಂತಿಕ ಮತ್ತು ಸಹಜ ಸಮೃದ್ಧ ಸಹಯೋಗದಲ್ಲಿ ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ `ಪಾರಂಪರಿಕ ಬೀಜೋತ್ಸವ’ವನ್ನು ಇದೇ ದಿನಾಂಕ 12ರ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಆಯೋಜಿಸಲಾಗಿದೆ.  

ಪಾರಂಪರಿಕ ಬೀಜೋತ್ಸವವು, ನಮ್ಮ ಬೀಜ ಪರಂಪರೆಯ ವೈಭವವನ್ನು ತೋರುವ ಕಾರ್ಯಕ್ರಮವಾಗಿದೆ. ಸ್ಥಳೀಯ ಆಹಾರ ಸಂಸ್ಕೃತಿಗಳ ಪರಿಚಯ ಮಾಡಿಕೊಡುವ ಉದ್ದೇಶ ಹೊಂದಿದೆ.  ಕರ್ನಾಟಕದ ಬೀಜ ಸಂರಕ್ಷಕರನ್ನೆಲ್ಲಾ ಒಂದೇ ವೇದಿಕೆಯಡಿ ತಂದು ‘ಕರ್ನಾಟಕ ಬೀಜ ಸಂರಕ್ಷಕರ ಬಳಗವನ್ನು’ ಹುಟ್ಟು ಹಾಕುವ ಕನಸು ನಮ್ಮದು.

ಕರ್ನಾಟಕ ಬೀಜ ವೈವಿಧ್ಯದ ತಾಣ. ರತ್ನಚೂಡಿ, ರಾಜಮುಡಿ, ಆಲೂರು ಸಣ್ಣ, ಗಂಧಸಾಲೆಯಂತ ದೇಸಿ ಭತ್ತ, ಕರಿ ಕಡ್ಡಿ ರಾಗಿ, ಉಂಡೆ ರಾಗಿ, ಮಜ್ಜಿಗೆ ರಾಗಿ, ಕೆಂಪು ನವಣೆ, ಮಲ್ಲಿಗೆ ಸಾವೆ, ಕೊರಲಿನಂಥ ನೂರಾರು ಸಿರಿಧಾನ್ಯಗಳು, ಮಟ್ಟುಗುಳ್ಳ, ಈರಂಗೆರೆ ಬದನೆ, ಬ್ಯಾಡಗಿ ಮೆಣಸಿನಕಾಯಿ, ತಂಬೂರಿ ಸೋರೆ, ಮಂತು ಕುಂಬಳ, ಕಾಶಿ ಟೊಮೊಟೋದಂತ ತರಕಾರಿ, ಕೆಂಪು ಹಲಸು, ದೇವನಹಳ್ಳಿ ಚಕ್ಕೋತ, ಏಲಕ್ಕಿ ಬಾಳೆಯಂಥ ಹಣ್ಣಿನ ತಳಿಗಳು ಕನ್ನಡ ನಾಡಿನಲ್ಲಿ ನೆಲೆಯಾಗಿವೆ. ಕನ್ನಡ ನಾಡಿನ ಬೀಜ ವೈವಿಧ್ಯ ಎಣಿಕೆಗೆ ದಕ್ಕದಷ್ಟು ಅಗಾಧವಾಗಿದೆ. 

ವಾಣಿಜ್ಯ ಬೆಳೆಗಳ ಹಾವಳಿಯಿಂದ ಇಂಥ ಅಪರೂಪದ ಬೀಜ ವೈವಿಧ್ಯ ಕಣ್ಮರೆಯಾಗುತ್ತಿದೆ. ಪಂಡರಾಪುರ ಹತ್ತಿ, ಬ್ಯಾಡಗಿ ಕಡ್ಡಿ, ಹಾಲುಬ್ಬಲು, ಜೇನುಗೂಡು ರಾಗಿ, ಮರ ಸಜ್ಜೆಯಂಥ ನೂರಾರು ತಳಿಗಳು ನಾಶದ ಅಂಚಿನಲ್ಲಿವೆ. ಪೋಷಕಾಂಶಗಳ ಆಗರವಾದ, ಸ್ಥಳೀಯ ವಾತಾವರಣಕ್ಕೆ ಹೊಂದಿಕೊಳ್ಳುವ, ಮಳೆ ವೈಪರಿತ್ಯವನ್ನು ಎದುರಿಸಿ ನಿಲ್ಲುವ ದೇಸಿ ತಳಿಗಳನ್ನು ಉಳಿಸಿ, ಬೆಳೆಸುವ ಅಗತ್ಯತೆ ಇದೆ.

ಒಂದು ದಿನದ ಬೀಜ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ಗುಂಪುಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು `ಬೀಜ ಮೇಳದಲ್ಲಿ’ ಪ್ರದರ್ಶಿಸಲಾಗುತ್ತಿದ್ದು, 1000 ಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ  ತಳಿಗಳು ಪ್ರದರ್ಶನಕ್ಕೆ ಬರುತ್ತಿವೆ. ಗುಣ ಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ‘ಸಿದ್ದ ಹಲಸು’ ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 

ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೋಲಾರದ ಬೀಜಮಾತೆ ಪಾಪಮ್ಮ `ಪಾರಂಪರಿಕ ಬೀಜೋತ್ಸವವನ್ನು’ ಉದ್ಘಾಟಿಸಲಿದ್ದಾರೆ. 

ಮಹಿಳಾ ಸಂಘಗಳು ಮೌಲ್ಯವರ್ಧಿತ ಪದಾರ್ಥಗಳನ್ನು  ಮಾರಾಟಕ್ಕೆ ತರಲಿವೆ. ದಾವಣಗೆರೆಯ ಜನತೆಗೆ ದೇಸೀ ಸೊಗಡಿನ ಆಹಾರಗಳನ್ನು ಪರಿಚಯಿಸಲು ಮಹಿಳಾ ಸಂಘದ ಸದಸ್ಯರು ಸಾಂಪ್ರದಾಯಿಕ ಅಡುಗೆಗಳ ಜೊತೆ ಬರಲಿದ್ದಾರೆ. ಬಾಯಿ ನೀರೂರಿಸುವ ‘ಕಪ್ಪಕ್ಕಿ ಪಾಯಸ’ ಮೇಳದ ಆಕರ್ಷಣೆಯಾಗಲಿದೆ.

ವಿವಿಧ ಸಾವಯವ ಮಳಿಗೆಗಳು, ರೈತ ಉತ್ಪಾದಕರ ಗುಂಪುಗಳು ಬೇಳೆ ಕಾಳುಗಳು, ಹಣ್ಣು ಹಂಪಲು ಮಾರಾಟಕ್ಕೆ ತರಲಿವೆ. ಅಪರೂಪದ ಬೀಜ, ಹಣ್ಣು, ಕಾಯಿ ಸೇರಿದಂತೆ ಕೃಷಿ ವೈವಿಧ್ಯದ ಉತ್ಪನ್ನಗಳು ಪ್ರದರ್ಶನಕ್ಕೆ ಬರಲಿವೆ. ನೈಸರ್ಗಿ ಕವಾಗಿ ಬೆಳೆದ ಮಾವು ಮಾರಾಟಕ್ಕೆ ಬರುತ್ತಿದೆ. 

ಬೀಜ ಉತ್ಸವದ ಅಂಗವಾಗಿ ನಗರದ ಪರಿಸರ ಪ್ರಿಯರಿಗಾಗಿ `ನಮ್ಮ ತೋಟದಿಂದ ನಮ್ಮ ಊಟ’ ಕಾರ್ಯಕ್ರಮ ಏರ್ಪಾಡಾಗಿದೆ. ತಾರಸಿ ಮತ್ತು ಮನೆ ಹಿತ್ತಲಿನಲ್ಲಿ ವೈವಿಧ್ಯದ ಕೈ ತೋಟವನ್ನು ನಿರ್ಮಿಸುವ ತರಬೇತಿ ನೀಡಲಾಗುತ್ತದೆ. ಅದಕ್ಕೆ ಅಗತ್ಯವಿರುವ ಮಣ್ಣು, ಗೊಬ್ಬರ, ಮಣ್ಣಿನ ಮಡಿಕೆ,  ಬೀಜದ ಮಾರಾಟವೂ ಇರುತ್ತದೆ. ತೆನೆ ತೋರಣ, ಕೃಷಿ ಆಚರಣೆಗಳ ಪ್ರದರ್ಶನ ಮತ್ತು ರೈತ ವಿಜ್ಞಾನಿಗಳ ಅನುಭವ ಹಂಚಿಕೆ ಇರುತ್ತದೆ.

ರಾಜ್ಯದ ವಿವಿಧ ಭಾಗಗಳಿಂದ ಬರುವ ಬೀಜ ಸಂರಕ್ಷಕರು ಪರಸ್ಪರ ಕಲೆತು, ಚರ್ಚಿಸಿ, ರಾಜ್ಯ ಮಟ್ಟದ ಬೀಜ ಸಂರಕ್ಷರ ಒಕ್ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಹಾಗೆಯೇ, ದಾವಣಗೆರೆ ನಗರದ ಕೈತೋಟ ಆಸಕ್ತರನ್ನು ಒಗ್ಗೂಡಿಸಿ ಒಂದು ‘ಪೌಷ್ಠಿಕ ಕೈತೋಟ’ ಒಕ್ಕೂಟ ರಚನೆ ಕೂಡ ಆಗಲಿದೆ.

ಮೇಳದ ವಿಶೇಷತೆಗಳು: ನಿರ್ಲಕ್ಷ್ಯಕ್ಕೆ ಒಳಗಾದ ಗೆಡ್ಡೆ ಗೆಣಸಿನಂಥ ಅಪರೂಪದ ಬೆಳೆಗಳ ಪ್ರದರ್ಶನ. 

ವಿವಿಧ ರೀತಿಯ ಸಿರಿಧಾನ್ಯಗಳು, ಸಾಂಪ್ರದಾಯಿಕ ತರಕಾರಿಗಳು, ಹಣ್ಣುಗಳು ಮತ್ತು ವಿವಿಧ ಭತ್ತದ ತಳಿಗಳ ಪ್ರದರ್ಶನ.

ಮಹಾರಾಷ್ಟ್ರ, ಒರಿಸ್ಸಾ, ಆಂಧ್ರ ಪ್ರದೇಶ, ತಮಿಳು ನಾಡು, ಹಿಮಾಚಲ ಪ್ರದೇಶದ ಬೀಜ ಸಂರಕ್ಷರ ಗುಂಪುಗಳು  ಭಾಗವಹಿಸಲಿವೆ.

ಸುಮಾರು 250 ವಿವಿಧ ರೀತಿಯ ತರಕಾರಿ ತಳಿಗಳು, ಅಕ್ಕಿ ಹಾಗೂ ಸಿರಿಧಾನ್ಯಗಳ ಮಾರಾಟ ನಡೆಯಲಿದೆ.

`ಬೀಜ ವಿನಿಮಯ’ ಕಾರ್ಯಕ್ರಮವಿ ರುತ್ತದೆ. ಆಸಕ್ತರು ಬೀಜ ಮತ್ತು, ಗಿಡಗಳನ್ನು ವಿನಿಮಯಕ್ಕೆ ತರಬಹುದು. 

ಅಪಾರವಾದ ಬೀಜ ವೈವಿಧ್ಯತೆ ಬರಲಿದ್ದು, ಕೈತೋಟ ಪ್ರಿಯರು ತಮಗೆ ಬೇಕಾದ ಅಗತ್ಯ ಬೀಜಗಳನ್ನು ಮತ್ತು ಅಪರೂಪದ ತಳಿಗಳನ್ನೂ  ಇಲ್ಲಿ ಖರೀದಿಸಲು ಅವಕಾಶ ಇರುತ್ತದೆ.

ನೈಸರ್ಗಿಕ ಮಾವು, ಹಲಸು, ಪರ್ಪಲ್ ಯಾಮ್ ಐಸ್ ಕ್ರೀಂ ಮತ್ತಿತರ ದೇಸೀ ಆಹಾರ ಉತ್ಪನ್ನಗಳು ಬಾಯಿ ಚಪ್ಪರಿಸಲು ಸಿಗಲಿವೆ ಎಂದು ಕೇಂದ್ರದ ಮುಖ್ಯಸ್ಥ
ಡಾ. ಟಿ.ಎನ್. ದೇವರಾಜ್ ಅವರು ತಿಳಿಸಿದ್ದಾರೆ. ವಿವರಗಳಿಗೆ ಮೊ : 9743140939ಗೆ ಸಂಪರ್ಕಿಸಬಹುದು.

error: Content is protected !!