ಹರಪನಹಳ್ಳಿ. ಮೇ 8 – ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪನವರ 73ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ತಾಲ್ಲೂಕಿನ ಅರಸೀಕೆರೆ ವೈ.ದೇವೇಂದ್ರಪ್ಪ ಅಭಿಮಾನಿ ಬಳಗ ಹಾಗೂ ವೈ.ಡಿ.ಅಣ್ಣಪ್ಪ ಅಭಿಮಾನಿ ಬಳಗದ ವತಿಯಿಂದ ಜನ್ಮ ದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಯರಬಳ್ಳಿ ಉಮಾಪತಿ ಮಾತನಾಡಿ, ದೇವೇಂದ್ರಪ್ಪ ಸರಳ ಹಾಗೂ ಸಜ್ಜನಿಕೆಯ ರಾಜಕಾರಣಿ, ಸಂಸದರಾಗಿ 5 ವರ್ಷ ಪೂರೈಸಿದರೂ ಎಲ್ಲಿಯೂ ಒಂದು ಕಪ್ಪು ಚುಕ್ಕೆಯಿಲ್ಲ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದೇವೇಂದ್ರಪ್ಪ, ಬಾಲ್ಯದಲ್ಲಿ ನಮ್ಮದು ಕಷ್ಟದ ಜೀವನವಾಗಿತ್ತು, ನನ್ನ ತಾಯಿ ಗಂಗಮ್ಮ ಹೇಗೆ ಬದುಕಬೇಕೆಂಬುದನ್ನು ರೂಪಿಸಿಕೊಟ್ಟರು. ಐವರು ಮಕ್ಕಳಿಗೂ ನಮ್ಮ ತಾಯಿಯೇ ಹೆಸರನ್ನಿಟ್ಟರು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಹಕಾರಿಯಾಯಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಲ್ಲಾ ಮೊಮ್ಮಕ್ಕಳು ಸೇರಿ ದೇವೇಂದ್ರಪ್ಪನವರ ಜೀವನ ಕುರಿತ ಒಂದು ಕಿರು ನಾಟಕ ಪ್ರದರ್ಶನ ಮಾಡಿದರು.
ಅಬಕಾರಿ ಜಂಟಿ ಆಯುಕ್ತ ಡಾ.ವೈ.ಡಿ.ಮಂಜುನಾಥ್ ಮಾತನಾಡಿ, ಶುಭ ಕೋರಿದರು. ವೈ.ಡಿ.ಅಣ್ಣಪ್ಪ, ಪ್ರಶಾಂತ್ ಪಾಟೀಲ್, ಬಿ.ರಾಮಪ್ಪ, ಡಾ.ಎಂ. ಸುರೇಶ್, ಅಬ್ದುಲ್ ಸಾಬ್, ಉಪನ್ಯಾಸಕ ವೈ.ಡಿ.ರಂಗನಾಥ್, ಲಕ್ಷ್ಮಿದೇವಿ ಅಣ್ಣಪ್ಪ, ಕೆಂಚಪ್ಪ, ಭಾಗ್ಯಮ್ಮ, ಜ್ಯೋತಿ ಶೇಖರ್, ಸ್ಪಂದನ, ಚಂದನ, ಗೋವರ್ಧನ್, ಶಾಂತ್ ಪಾಟೀಲ್, ಮಿಂಚು, ಪ್ರೀತಮ್, ವೈ. ಟಿ.ಕೊಟ್ರೇಶ್, ಎ.ಹೆಚ್.ನವೀನ್, ಸಾನ್ವಿ ಹಾಗೂ ಅಭಿಮಾನಿ ಬಳಗದವರು ಹಾಜರಿದ್ದರು.