ದಾವಣಗೆರೆ, ಮೇ 7 – ಮನೆಯಲ್ಲಿ ಮತದಾನದ ಅವಕಾಶವಿದ್ದರೂ, ಹಲವಾರು ವಯೋ ವೃದ್ಧರು ಮತಗಟ್ಟೆಗಳಿಗೇ ಬಂದು ಉತ್ಸಾಹದಿಂದ ಮತ ಚಲಾಯಿಸಿದರು.
ನಗರದ ಎಂ.ಸಿ.ಸಿ. ಬಿ ಬ್ಲಾಕ್ನಲ್ಲಿರುವ ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿನ ಸ್ಥಾಪಿಸ ಲಾದ ಮತಗಟ್ಟೆಯಲ್ಲಿ ಮತದಾನ ಮಾಡಿದ 90ರ ಹರೆಯದ ಡಾ. ಸಂಜೀವಪ್ಪ, ರಾಷ್ಟ್ರೀಯ ವಿಷಯಗಳು ಏನೇ ಇದ್ದರೂ, ಸ್ಥಳೀಯ ವಿಷಯ ಹಾಗೂ ಸ್ಥಳೀಯ ಅಭ್ಯರ್ಥಿಗಳನ್ನೇ ಪರಿಗಣಿಸಿ ಮತದಾನ ಮಾಡಿದ್ದೇನೆ ಎಂದರು.
ವೃದ್ಧರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶ ನೀಡುವ ಪದ್ಧತಿ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ನನ್ನ ಮನೆಯ ಸಮೀಪ ಇರುವ ಐದಾರು ವೃದ್ಧರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ದೊರೆತಿಲ್ಲ. ಅವರು ಮತಗಟ್ಟೆಗೆ ಬರಲೂ ಸಾಧ್ಯವಿಲ್ಲದಂತಾಗಿ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದರು.
ಕಳೆದ ದಶಕಗಳಿಂದ ಹಳಬರೇ ಸ್ಥಳೀಯ ರಾಜಕೀಯದಲ್ಲಿದ್ದಾರೆ. ಹೊಸಬರು ಬರಬೇಕಿದೆ ಎಂದು ಇನ್ನೋರ್ವ ಹಿರಿಯ ವೈದ್ಯರಾದ
ಡಾ. ತಿಪ್ಪಣ್ಣ ಅಭಿಪ್ರಾಯಪಟ್ಟರು.
89 ವರ್ಷದ ನಿವೃತ್ತ ಸರ್ವೇ ಅಧಿಕಾರಿ ಜಯಪ್ಪ ಅವರು ಮತದಾನದ ನಂತರ ಮಾತನಾಡಿ, 1959ರಿಂದಲೂ ನಾನು ತಪ್ಪದೇ ಮತದಾನ ಮಾಡುತ್ತಿದ್ದೇನೆ. ಈ ಬಾರಿ ಬೆಂಗಳೂರಿನಿಂದ ಇಲ್ಲಿಗೆ ಬಂದು ಮತದಾನ ಮಾಡಿದ್ದೇನೆ ಎಂದರು.
ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಈ ಬಾರಿ ಜಾತಿ ಹಾಗೂ ಧರ್ಮಗಳೇ ಪ್ರಮುಖ ಚರ್ಚಾ ವಿಷಯವಾಗಿದ್ದು ಬೇಸರ ತರಿಸಿದೆ. ಜನರು ಎದುರಿಸುವ ನೈಜ ವಿಷಯಗಳ ಆಧಾರದ ಮೇಲೆ ಚುನಾವಣೆ ನಡೆಯಬೇಕಿತ್ತು ಎಂದರು.
ಅವರ ಮೊಮ್ಮಗ ಬಿ.ಎಸ್. ಮಿಲನ್ ಮಾತನಾಡಿ, ಸರಿಯಾದ ಅಭ್ಯರ್ಥಿ ಸರಿಯಾದ ಪಕ್ಷದಲ್ಲಿ ಇಲ್ಲ ಎಂಬುದೇ ಬೇಸರ. ಯಾವುದೇ ಸರ್ಕಾರ ಬಂದರೂ, ಯುವಕರಿಗೆ ಹೆಚ್ಚಿನ ಅವಕಾಶ ದೊರೆತು ದೇಶದ ಪ್ರಗತಿಗೆ ದಾರಿ ಮಾಡಿಕೊಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.