ಜಿಲ್ಲಾಧಿಕಾರಿಗಳ ಭೇಟಿ, ಪ್ರಶಂಸೆ
ದಾವಣಗೆರೆ, ಮೇ 6 – ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲೆಬೇತೂರು ಗ್ರಾಮ ದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾ ವಣೆ-2024 ಅಂಗವಾಗಿ ಮತದಾನ ಜಾಗೃತಿಯೊಂದಿಗೆ ಮಹಿಳಾ ಮತ ದಾರರನ್ನು ಆಕರ್ಷಿಸಲು ಮತ್ತು ಮತ ದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿಸಲು `ಪಿಂಕ್ ಸಖಿ ಬೂತ್’ ನ ವ್ಯವಸ್ಥೆಯನ್ನು ಮಾಡಲಾಗಿದೆ. ಇದೇ ಗ್ರಾಮ ಪಂಚಾಯ್ತಿಗೆ ಸೇರುವ ಬಿ.ಕಲಪನಹಳ್ಳಿ ಹಾಗೂ ಬಿ. ಚಿತ್ತಾನಹಳ್ಳಿಯಲ್ಲೂ ಮತದಾನಕ್ಕಾಗಿ ಉತ್ತಮ ಮತಗಟ್ಟೆಯನ್ನು ವ್ಯವಸ್ಥೆ ಮಾಡಲಾಗಿದೆ.
`ನಮ್ಮ ಮತ – ನಮ್ಮ ಹಕ್ಕು, ನನ್ನ ಮತ – ನನ್ನ ಧ್ವನಿ, ನಮ್ಮ ನಡೆ ಮತಗಟ್ಟೆಯ ಕಡೆ’ ಎಂಬ ಘೋಷಣೆಗಳೊಂದಿಗಿರುವ `ಪಿಂಕ್ ಸಖಿ ಬೂತ್’ ಮತದಾರರನ್ನು ಆಕರ್ಷಿಸುವಂತೆ ಮಾಡಿದೆ. ಇಂದು ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅರಮನೆಯ ರೀತಿಯಲ್ಲಿ ಸಜ್ಜುಗೊಂಡಿರುವ `ಪಿಂಕ್ ಸಖಿ ಬೂತ್’ ಮತಗಟ್ಟೆಯನ್ನು ವೀಕ್ಷಿಸಿ ಹಾಗೂ ಚಿಕ್ಕ ಚಿಕ್ಕ ಮಡಿಕೆಗಳ ಮೇಲೆ ಲೋಕಸಭಾ ಚುನಾವಣೆ ಮೇ 7, 2024 ಎಂದು ಬರೆದಿರುವುದನ್ನು ಗಮನಿಸಿ ಮತ್ತು ಪಕ್ಕದಲ್ಲಿದ್ದ ಕುಡಿಯುವ ನೀರಿನ ಮಡಿಕೆಯಲ್ಲಿದ್ದ ನೀರನ್ನು ಕುಡಿದು ವ್ಯವಸ್ಥೆ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಕಾರ್ಯವನ್ನು ಪ್ರಶಂಸಿಸಿದರು.