ಹರಪನಹಳ್ಳಿ ಕ್ಷೇತ್ರದ ಪ್ರಚಾರದಲ್ಲಿ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್
ಹರಪನಹಳ್ಳಿ,ಮೇ 5 – ರಾಜಕಾರಣದಲ್ಲಿ ನನಗೆ ಯಾರೂ ಗಾಡ್ ಫಾದರ್ ಇಲ್ಲ. ಜನಸಾಮಾನ್ಯರೇ ನನ್ನ ಗಾಡ್ ಫಾದರ್. ನಾನು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಸ್ವಾಭಿಮಾನಿಗಳಿಗೆ ಗೆಲುವು ಸಿಕ್ಕಂತೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.
ಹರಪನಹಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ಅವರು, ಸಾಮಾನ್ಯರಿಂದ, ಸಾಮಾನ್ಯರಿಗಾಗಿ, ಸಾಮಾನ್ಯರಿಗೋಸ್ಕರ ನಡೆಸುತ್ತಿರುವ ಚುನಾವಣೆ ಇದು. ದೊಡ್ಡ ನಾಯಕರು ಯಾರೂ ನನ್ನ ಹಿಂದೆ ಇಲ್ಲ. ನನ್ನ ಜೊತೆಗಿರುವುದು ಸ್ವಾಭಿಮಾನಿಗಳು. ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಲೇ ಬೇಕೆಂದು ಪಣ ತೊಟ್ಟಿರುವ ಜನರು ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ, ಲೋಕಸಭೆಗೆ ಕಳುಹಿಸಿಕೊಡುವ ಮೂಲಕ ನಾವು ಸ್ವಾಭಿಮಾನಿಗಳು ಎಂದು ಸಾಬೀತುಪಡಿಸುತ್ತಾರೆ ಎಂದರು.
ಕ್ರೀಡೆಗೆ ವಿಶೇಷ ಆದ್ಯತೆ ನೀಡಲಾಗುವುದು. ಕುಸ್ತಿಪಟುಗಳು ಹೆಚ್ಚಿದ್ದು, ಅವರಿಗೆ ಸೂಕ್ತ ಸೌಲಭ್ಯವುಳ್ಳ ಗರಡಿಮನೆ ಆಗಬೇಕಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕಿದೆ. ಮಹಿಳೆಯರ ಬದುಕು ಹಸನಾಗಿಸಲು ವಿಶೇಷ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇನೆ ಎಂದು ತಿಳಿಸಿದರು.