ದಾವಣಗೆರೆ, ಮೇ 2 – ಈ ಬಾರಿ ಪವಿತ್ರ ಹಜ್ ಯಾತ್ರೆಗೆ ಜಿಲ್ಲೆಯಿಂದ 216 ಜನ ಪ್ರಯಾಣ ಬೆಳೆಸಲಿದ್ದಾರೆ.
ಇಲ್ಲಿಯ ಕೆ.ಆರ್. ರಸ್ತೆಯಲ್ಲಿರುವ ಗುಲ್ಷನ್ ಶಾದಿಮಹಲ್ನಲ್ಲಿ ಖಾದಿ ಮುಲ್ ಹುಜ್ಜಾಜ್ ಸಮಿತಿ ಆಶ್ರಯದಲ್ಲಿ ಹಜ್ ಯಾತ್ರಿಕರಿಗೆ ತರಬೇತಿ ಶಿಬಿರ ಹಾಗೂ ಚುಚ್ಚುಮದ್ದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಾಸಕ ಶಾಮನೂರು ಶಿವಶಂಕರಪ್ಪ ಅವರು ಪಾಲ್ಗೊಂಡು ತಮ್ಮಗಳ ಪ್ರಯಾಣ ಸುಖಕರವಾಗಲಿ ಎಂದು ಶುಭ ಹಾರೈಸಿದರು.
ಮುಸ್ಲಿಂ ಸಮಾಜದ ಮುಖಂಡ ಸಾಧೀಕ್ ಪೈಲ್ವಾನ್, ಜಿಲ್ಲಾ ಹಜ್ ಸಮಿತಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾರ್ಯದರ್ಶಿ ಟಿ.ಎಸ್. ರಹಮತ್ ವುಲ್ಲಾ, ರಾಜ್ಯ ಹಜ್ ಕಮಿಟಿ ಸದಸ್ಯ ಸೈಯಿದ್ ಚಾರ್ಲಿ, ಪಾಲಿಕೆ ಸದಸ್ಯ ಎ.ಬಿ.ರಹೀಮ್, ಎನ್. ಕೆ. ಇಸ್ಮಾಯಿಲ್, ಚಾರ್ಲಿ ಎಜ್ಯುಕೇಷನ್ ಫೌಂಡೇಶನ್ನ ವಸೀಮ್ ಚಾರ್ಲಿ, ಸೈಯದ್ ಹಸೀಬ್ ಹಬೀಬ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಲೇಮಾಗಳಿಂದ ತರಬೇತಿ ನೀಡಲಾಯಿತು. ಯಾತ್ರಿಗಳಾದ ಅತಾವುಲ್ಲಾ, ಮಹಮ್ಮದ್ ಜುಬೇರ್ ಅವರುಗಳು ಮಾತನಾಡಿ, ಸರ್ಕಾರದ ಅಡಿಯಲ್ಲಿ ನಮಗೆ ಲಾಟರಿ ಮೂಲಕ ಆಯ್ಕೆ ನಡೆದು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಬಹಳ ಉತ್ತಮವಾದ ವ್ಯವಸ್ಥೆ ಮಾಡಲಾಗಿದೆ ಎಂದು ಹಕಾನಿ ಅತಾವುಲ್ಲಾ ಅವರು ವಿವರಿಸಿದರು.