ದಾವಣಗೆರೆ, ಮೇ 1- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸೋಮವಾರ ನಗರದ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಮತದಾನ ಜಾಗೃತಿ ಜಾಥಾಗೆ ಜಿ.ಪಂ. ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್ ಚಾಲನೆ ನೀಡಿದರು.
`ಒಂದು ಬಟನ್ ಒತ್ತುವ ಮೂಲಕ ಇಡೀ ರಾಷ್ಟ್ರವನ್ನು ಬದಲಾಯಿಸಬಹುದು, `ಬಟನ್ ಅನ್ನು ಬುದ್ಧಿವಂತಿಕೆಯಿಂದ ಒತ್ತಿರಿ, `ನಿಮ್ಮ ಮತದ ಮೂಲಕ ನಿಮ್ಮ ಧ್ವನಿಯನ್ನು ಕೇಳಬಹುದು ಸೇರಿದಂತೆ ಹಲವು ಘೋಷ ವಾಕ್ಯ ಕೂಗುತ್ತಿದ್ದರು.
ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡ ಜಾಥಾವು ಪಿ.ಬಿ.ರಸ್ತೆ, ಹಳೇ ಬಸ್ ನಿಲ್ದಾಣ, ಗಾಂಧಿ ಸರ್ಕಲ್, ಅಶೋಕ ರಸ್ತೆಯ ಮಾರ್ಗವಾಗಿ ಜಯದೇವ ವೃತ್ತ ತಲುಪಿ ಕ್ಯಾಂಡಲ್ ಬೆಳಗಿಸಿ, ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಜಿ.ಪಂ. ಉಪನಿರ್ದೇಶಕರಾದ ಶಾರದಾ ದೊಡ್ಡಗೌಡ್ರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಯೋಜನಾಧಿಕಾರಿ ಜಿ. ನೇತ್ರಾವತಿ, ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಸಹಾಯಕಿಯರು ಮತ್ತು ಇತರರು ಇದ್ದರು.