ಹರಿಹರ: ಮೂಲಭೂತ ಸೌಕರ್ಯಗಳ ಕೊರತೆ ; 1356 ಮತದಾರರು ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನ

ಹರಿಹರ: ಮೂಲಭೂತ ಸೌಕರ್ಯಗಳ ಕೊರತೆ ; 1356 ಮತದಾರರು ಚುನಾವಣಾ ಬಹಿಷ್ಕಾರಕ್ಕೆ ತೀರ್ಮಾನ

ಹರಿಹರ, ಮೇ 1- ನಗರದ 10ನೇ ವಾರ್ಡಿನ ವಿನಾಯಕ ನಗರ, ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಹಾಗೂ ಪೌರಕಾರ್ಮಿಕರ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯಗಳು ಸರಿಯಾಗಿ ಇಲ್ಲದೇ ಇರುವುದರಿಂದ ಬರುವ ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತದಾನದ ಮಾಡದೇ ಬಹಿಷ್ಕಾರ ಹಾಕುವುದಾಗಿ ಬಡಾವಣೆಯ ಮುಖಂಡ ಹೆಚ್.ಕೆ.ಮೂರ್ತಿ ಮತ್ತು ಕೃಷ್ಣ ತಿಳಿಸಿದರು.

ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹತ್ತನೇ ವಾರ್ಡಿನ ವಿನಾಯಕ ನಗರ, ಭಾರತ್ ಆಯಿಲ್ ಮಿಲ್ ಕಾಂಪೌಂಡ್ ಮತ್ತು ಪೌರ ಕಾರ್ಮಿಕರ ಬಡಾವಣೆಯಲ್ಲಿ ಅತಿ ಹೆಚ್ಚು ಬಡ ಕೂಲಿ ಕಾರ್ಮಿಕರು ಜೀವನ ನಡೆಸುತ್ತಾರೆ ಮತ್ತು ಹೆಚ್ಚಾಗಿ ಅವಿದ್ಯಾವಂತರಿದ್ದಾರೆ. ಸುಮಾರು 60 ವರ್ಷಗಳಿಂದ ಇಲ್ಲಿನ ಬಡಾವಣೆಯ ಸ್ಥಳದಲ್ಲಿಯೇ ಜೀವನ ನಡೆಸಿಕೊಂಡು ಹೋಗುತ್ತಿದ್ದು, ಮೂಲಭೂತ ಸೌಕರ್ಯಗಳಾದ ಚರಂಡಿ, ಬೀದಿ ದೀಪ, ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ಅಂಗನವಾಡಿ ಕಟ್ಟಡ, ಸಮುದಾಯ ಭವನ, ಯುಜಿಡಿ, ಶೌಚಾಲಯ ಸ್ವಚ್ಛತೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಿಲ್ಲ. ಜೊತೆಗೆ ಇಲ್ಲಿನ ಬಡಾವಣೆಗಳನ್ನು ಸ್ಲಂ ಏರಿಯಾ  ಎಂದು ಗುರುತಿಸಿದ್ದರೂ ಸಹ, ಇದುವರೆಗೂ ರಾಜ್ಯ ಸರ್ಕಾರವಾಗಲೀ, ಸ್ಥಳೀಯ ಆಡಳಿತವಾಗಲೀ   ಹಕ್ಕುಪತ್ರಗಳನ್ನು ನೀಡಿಲ್ಲ. 

ಇಷ್ಟೆಲ್ಲಾ ಒಂದಿಲ್ಲೊಂದು ಬಡಾವಣೆಯಲ್ಲಿ ಸಮಸ್ಯೆಗಳಿದ್ದು, ಸರ್ಕಾರ ನಮಗೆ ಹಕ್ಕುಪತ್ರವನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ, ವಾರ್ಡಿನ ಬೂತ್ ಸಂಖ್ಯೆ 48 ರ 1356 ಮತದಾರರು ಲೋಕಸಭಾ ಚುನಾವಣೆಯಲ್ಲಿ ಸಾಮೂಹಿಕವಾಗಿ ಮತದಾನದಿಂದ ದೂರ ಉಳಿದು ಮತದಾನ ಬಹಿಷ್ಕಾರ ಮಾಡಲು ತೀರ್ಮಾನ ಮಾಡಿರುತ್ತೇವೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ರಮೇಶ್, ಯಮನೂರು, ಹನುಮಂತಪ್ಪ, ಅಣ್ಣಪ್ಪ, ಬಸವರಾಜ್ ದರ್ಶನ್, ಹಾಲೇಶ್, ರಾಜೇಶ್, ರಾಜಶೇಖರ್, ನಿಂಗಪ್ಪ, ಮಂಜುನಾಥ್, ರುದ್ರೇಶ್ ಇತರರರಿದ್ದರು.

error: Content is protected !!