ದಾವಣಗೆರೆ, ಮೇ 1- ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕುಂದವಾಡ ಕೆರೆ ದುರಸ್ತಿ ನೆಪದಲ್ಲಿ ಸುಮಾರು 16 ಕೋಟಿ ರೂ. ಖರ್ಚಿನ ಲೆಕ್ಕ ತೋರಿಸಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾಬಾಯಿ ಮಾಲತೇಶರಾವ್ ಆರೋಪಿಸಿದರು.
ಕುಂದುವಾಡ ಕೆರೆ ಏರಿ ಮೇಲೆ ಇಂದು ಬೆಳಿಗ್ಗೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಭ್ರಷ್ಟಾಚಾರವನ್ನು ಖಂಡಿಸಿ, ಜಿಲೇಬಿ ಮಾಡುವ ಮೂಲಕ ನಡೆಸಿದ ಪ್ರತಿಭಟನೆ ನೇತೃತ್ವ ವಹಿಸಿ ಅವರು ಮಾತನಾಡಿದರು.
ದಾವಣಗೆರೆ ನಗರಸಭೆ ಆಗಿದ್ದಾಗ ನೀರಿನ ಅವ್ಯವಸ್ಥೆ ಉಂಟಾಗಿ, ನಗರದ ಜನರು ಹರಿಹರಕ್ಕೆ ಹೋಗಿ ನೀರು ತರುವುದನ್ನು ಗಮನಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕೊಳಚೆ ನೀರಿನ ಗುಂಡಿಯಾಗಿದ್ದ ಸುಮಾರು 236 ಎಕರೆ ಕುಂದವಾಡ ಕೆರೆಯನ್ನು ಕೇವಲ 2.50 ಕೋಟಿ ರೂ. ವಚ್ಚದಲ್ಲಿ ಪುನರ್ ನಿರ್ಮಿಸಿ ನೀರಿನ ಶುದ್ಧೀಕರಣ ಘಟಕ, ನೀರು ಸಂಗ್ರಹ ಹಾಗೂ ವಿತ ರಣಾ ವ್ಯವಸ್ಥೆಯನ್ನು ಕೈಗೊಂಡಿದ್ದರು ಎಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರಿಗೆ ಅಭಿವೃದ್ಧಿ ವಿಷಯದಲ್ಲಿ ಓಪನ್ ಚಾಲೆಂಜ್ ಮಾಡುತ್ತಿದ್ದೇನೆ. ಮಲ್ಲಿಕಾರ್ಜುನ್ ಅವರ ಬಳಿ ಚರ್ಚೆ ಬೇಡ. ನಾನೇ ಚರ್ಚೆಗೆ ಬರುತ್ತೇನೆ. ಚರ್ಚೆಗೆ ಬರುವ ಮುನ್ನ ದಾವಣಗೆರೆ ಜನರ ಬಳಿ ಹೋಗಿ ದಾವಣಗೆರೆ ಯಲ್ಲಿ ಯಾರು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಿ ಬರಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ನ ಮಂಗಳಮ್ಮ, ಮಂಜಮ್ಮ, ಕವಿತಾ, ಸುಷ್ಮಾ ಪಾಟೀಲ್, ಉಮಾಕುಮಾರ್, ಕಾವ್ಯ, ಸಲ್ಮಾಬಾನು, ಕಮಲಮ್ಮ, ರುದ್ರಮ್ಮ, ದಿಲ್ ಶಾದ್, ಸುಧಾ, ಗೀತಾ, ಸುನೀತಾ, ಶಿಲ್ಪ, ಕಾವೇರಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್ ಸೇರಿದಂತೆ ಹಲವರಿದ್ದರು,