ಸಂಸತ್ತಿನಲ್ಲಿ ಒಂದು ಬಾರಿಯೂ ಧ್ವನಿ ಎತ್ತದ ಬಿಜೆಪಿ ಸಂಸದರು : ವಿನಯ್‌ ಕುಲಕರ್ಣಿ

ಸಂಸತ್ತಿನಲ್ಲಿ ಒಂದು ಬಾರಿಯೂ ಧ್ವನಿ ಎತ್ತದ ಬಿಜೆಪಿ ಸಂಸದರು : ವಿನಯ್‌ ಕುಲಕರ್ಣಿ

ಹರಿಹರ, ಏ.30- ರಾಜ್ಯದ ಜ್ವಲಂತ ಸಮಸ್ಯೆಗಳ ಪರವಾಗಿ ಕೇಂದ್ರದ ಸಂಸತ್ ಭವನದಲ್ಲಿ ಒಂದು ಬಾರಿ ಕೂಡ ಧ್ವನಿ ಎತ್ತದೇ ಇರುವಂತಹ ರಾಜ್ಯದ ಬಿಜೆಪಿ ಸಂಸದರನ್ನು ಆಯ್ಕೆ ಮಾಡುವುದಕ್ಕಿಂತ ಜನರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಹೇಳುವಂತಹ ಬುದ್ಧಿವಂತಿಕೆ ಇರುವ ಕಾಂಗ್ರೆಸ್ ಪಕ್ಷದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಶಾಸಕ ವಿನಯ್ ಕುಲಕರ್ಣಿ ಕರೆ ನೀಡಿದರು.

ನಗರದ ದೇವಸ್ಥಾನ ರಸ್ತೆಯ ರೇಣುಕಾ ಮಂದಿರದ ಸಭಾಂಗಣದಲ್ಲಿ, ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಮುಂಬರುವ ಬಸವೇಶ್ವರ ಜಯಂತಿ ಆಚರಣೆ ಪೂರ್ವ ಭಾವಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತರ ಜೀವನ ಸಂಕಷ್ಟದ ಸ್ಥಿತಿಯಲ್ಲಿ ಇದ್ದರೂ ಮತ್ತು ಕೇಂದ್ರದಲ್ಲಿ ಆಡಳಿತ ಮಾಡುತ್ತಿರುವ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದರೂ. ರಾಜ್ಯದಿಂದ ಗೆದ್ದು ಹೋಗಿದ್ದ 28 ಸಂಸದರು ಒಂದು ದಿನ ಕೂಡ ರಾಜ್ಯದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಿಳಿಸಿ, ಕೇಂದ್ರ ಸರ್ಕಾರದ ಗಮನಕ್ಕೆ ತರುವಂತಹ ಕೆಲಸ ಮಾಡಲು ಮುಂದಾಗಲಿಲ್ಲ ಎಂದು ಅವರು ಕಿಡಿಕಾರಿದರು. 

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಜಿಲ್ಲೆಯ ಜನರ ಕಷ್ಟಗಳನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದಾರೆ. ಅವರಿಗೆ ಹಿಂದಿ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಯಲ್ಲಿ ಮಾತನಾಡುವಂತಹ ಬುದ್ಧಿವಂತಿಕೆ ಇದೆ. ಜಿಲ್ಲೆಯ ಜನರ ಕಷ್ಟಗಳ ಬಗ್ಗೆ ಕೇಂದ್ರದ ಸಂಸತ್ ಭವನದಲ್ಲಿ ಹೋರಾಟ ಮಾಡಿ, ಪಡೆಯುವಂತಹ ಜಾಣ್ಮೆ, ಚಾಕಚಕ್ಯತೆ ಇರುವುದರಿಂದ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಕಾರ್ಯವನ್ನು ಮತದಾರರು ಮಾಡಬೇಕು ಎಂದು ಹೇಳಿದರು.

ಬಳ್ಳಾರಿ ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಬಸವೇಶ್ವರರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕುವಂತೆ ಆದೇಶ ಮಾಡಿದ್ದಾರೆ. ಜೊತೆಗೆ, ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಆದೇಶವನ್ನು ನೀಡಿದ್ದು, ರಾಜ್ಯದ ವೀರಶೈವ ಸಮಾಜದವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ ಎಂದು ಹೇಳಿದರು.

ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು  ಲಿಂಗಾಯತ ಧರ್ಮದವರಿಗೆ ಅನ್ಯಾಯವಾ ದಾಗಲೆಲ್ಲಾ ಧ್ವನಿ ಎತ್ತಿ ಸಮಾಜದ ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಾರೆ. ಅವರು ಸಮಾಜದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವಾಗ ಸಮಾಜದ ಜನರು ಅವರ ಕುಟುಂಬ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತವನ್ನು ಕೊಡುವ ಮೂಲಕ ಅವರಿಗೆ ಇನ್ನಷ್ಟು ಶಕ್ತಿಯನ್ನು ತುಂಬುವ ಕೆಲಸ ಮಾಡಿಬೇಕಾಗಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ರೇಣುಕಾ ಪ್ರಸಾದ್ ಮಾತನಾಡಿದರು.

ಕಾಂಗ್ರೆಸ್ ಮುಖಂಡರಾದ ಕೆ.ಸಿ. ಕೊಂಡಯ್ಯ, ನಂದಿಗಾವಿ ಶ್ರೀನಿವಾಸ್, ಟಿ.ಜೆ. ಮುರುಗೇಶಪ್ಪ, ನಿಖಿಲ್ ಕೊಂಡಜ್ಜಿ, ಡಿ. ಕುಮಾರ್, ಶಂಕರ್ ಖಟಾವ್ಕರ್, ಅರಸಿಕೇರಿ ಕೊಟ್ರೇಶ್, ದಾವಣಗೆರೆ ಪ್ರಕಾಶ್ ಪಾಟೀಲ್, ವೀರೇಶ್ ಯಾದವಾಡ್, ಜಿ.ವಿ ಪ್ರವೀಣ್, ಬೇವಿನಹಳ್ಳಿ ಆರ್.ಸಿ. ಪಾಟೀಲ್  ಇತರರು ಹಾಜರಿದ್ದರು.

error: Content is protected !!