ದಲಿತ ಸಮಾಜದ ಏಳಿಗೆಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟ ಕಾಂಗ್ರೆಸ್

ದಲಿತ ಸಮಾಜದ ಏಳಿಗೆಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟ ಕಾಂಗ್ರೆಸ್

ಹರಹರದಲ್ಲಿ ಮಾಜಿ ಸಚಿವ ಹೆಚ್.ಆಂಜನೇಯ

ಹರಿಹರ, ಏ.29- ಕಾಂಗ್ರೆಸ್ ಪಕ್ಷವು ದಲಿತ ಸಮಾಜದ ಏಳಿಗೆಗಾಗಿ ಸಾಕಷ್ಟು ಅನುಕೂಲ ಮಾಡಿದ್ದರಿಂದ ಹರಿಹರ ತಾಲ್ಲೂಕಿನ ದಲಿತ ಸಮಾಜದವರು ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತವನ್ನು ಹಾಕುವುದರ ಮೂಲಕ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಕರೆ ನೀಡಿದರು.

ನಗರದ ಪತ್ರಿಕಾಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. 

ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು  ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ, ರಾಜ್ಯದಲ್ಲಿ ದಾವಣಗೆರೆ ನಗರವನ್ನು ಮಾದರಿ ನಗರವನ್ನಾಗಿ ಮಾಡಿದ್ದರಿಂದ ಅವರ ಮನೆತನದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ದಲಿತ ಸಮಾಜದ ಜನರು ಹೆಚ್ಚು ಮತಗಳನ್ನು ಹಾಕುವ ಮೂಲಕ ಅವರನ್ನು ಭಾರೀ ಬಹುಮತದೊಂದಿಗೆ ಗೆಲ್ಲಿಸುವ ಕಾರ್ಯವನ್ನು ಮಾಡಬೇಕೆಂದು ಹೇಳಿದರು.

ರಾಜ್ಯದಲ್ಲಿ ಇದುವರೆಗೂ ಆಡಳಿತ ಮಾಡಿರುವ ಕಾಂಗ್ರೆಸ್ ಪಕ್ಷವು ಕೇವಲ ಒಂದು ಜಾತಿಗೆ ಸೀಮಿತವಾಗಿ ಅಧಿಕಾರ ಮಾಡಿಲ್ಲ ಮತ್ತು ರಾಜ್ಯದಲ್ಲಿ ಎಸ್.ನಿಜಲಿಂಗಪ್ಪ, ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್, ಕೆಂಗಲ್ ಹನುಮಂ ತಯ್ಯ, ಎಸ್.ಎಂ.ಕೃಷ್ಣ, ಎಸ್.ಬಂಗಾರಪ್ಪ, ದೇವರಾಜ ಅರಸು, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ವರ್ಗದವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಟ್ಟಿದೆ. ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅವಕಾಶ ಇತ್ತು. ಆದರೆ, ದುರದೃಷ್ಟವಶಾತ್ ಅವರು ಕೇಂದ್ರದ ರಾಜಕಾರಣಕ್ಕೆ ಒಲವು ನೀಡಿದ್ದರಿಂದ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವಂತಾಗಿದೆ ಎಂದರು.

ರಾಜ್ಯದಲ್ಲಿ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಕಾಲದಲ್ಲಿ ದಲಿತರಿಗೆ ಹೆಚ್ಚು ಅನುಕೂಲ ಮಾಡಬೇಕೆಂಬ ಉದ್ದೇಶದಿಂದ ಎಸ್.ಇ.ಪಿ. ಮತ್ತು ಟಿ.ಎಸ್.ಪಿ ಕಾಯ್ದೆ ಜಾರಿಗೆ ತರಲಾಯಿತು. ಆದರೆ, ಅದನ್ನು ಸರಿಯಾಗಿ ದಲಿತರಿಗೆ ಬಳಕೆ ಮಾಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಮತ್ತು ಅದರಲ್ಲಿ ಹತ್ತು ಸಾವಿರ ಕೋಟಿ ಹಣವನ್ನು, ದಲಿತ ಸಮಾಜದ ಬಡವರಿಗೆ ಬಳಕೆ ಮಾಡದೇ, ರಸ್ತೆ ಅಭಿವೃದ್ಧಿಗೆ ಬಳಕೆ ಮಾಡಿ ದಲಿತ ಜನರು ಇನ್ನೂ ಬಡತನದಲ್ಲಿ ಜೀವನ ಮಾಡುವಂತೆ ಮಾಡಿದ್ದಾರೆ. ಹಾಗಾಗಿ ಬಿಜೆಪಿ ಪಕ್ಷವು ಜನ ವಿರೋಧಿ ಹಾಗೂ ಪ್ರಜಾತಂತ್ರ ವಿರೋಧಿ ಪಕ್ಷವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್  ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಸದಸ್ಯ ರಜನಿಕಾಂತ್, ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಮುಖಂಡರಾದ ಸುರೇಶ್ ಹಾದಿ ಮನಿ, ಎಂ.ಬಿ.ಅಣ್ಣಪ್ಪ, ತಾ. ಮಾದಿಗ ಸಮಾಜದ ಅಧ್ಯಕ್ಷ ಆನಂದ್‌ಕುಮಾರ್, ಕಾರ್ಯದರ್ಶಿ ಹೆಚ್.ಶಿವಪ್ಪ, ಹೆಚ್.ಎನ್.ನಾಗರಾಜ್, ಬಿ.ಎನ್. ರಮೇಶ್, ಸಂತೋಷ ನೋಟದರ್, ಕಿರಣ್ ಭೂತೆ, ಸಂತೋಷ ದೊಡ್ಡಮನೆ,  ವಿಜಯ ಕುಮಾರ್, ಭಾಗ್ಯಮ್ಮ, ನಾಗಮ್ಮ, ತಿಪ್ಪೇಸ್ವಾಮಿ, ನಿಧಿ, ನಾರಾಯಣ್ ಹಾಗೂ ಇತರರು ಹಾಜರಿದ್ದರು.

error: Content is protected !!