ಹೊನ್ನಾಳಿ, ಏ.26-ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರ ಅಭಿಮಾನಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಈ ವೇಳೆ ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ಚುನಾವಣೆಯಲ್ಲಿ ಸೋಲು, ಗೆಲುವು ಸಹಜ, ನನ್ನ ಹೋರಾಟ ಗೆಲ್ಲಲು. ಪ್ರತಿ ಹಳ್ಳಿಯಲ್ಲೂ ಇಬ್ಬರ ಜಗಳದಲ್ಲಿ ವಿನಯ್ ಗೆಲ್ಲುತ್ತಾನೆ ಎಂಬುದು ಜನರ ಭಾವನೆ. ಆದ್ದರಿಂದ ಸೋತರು, ಗೆದ್ದರು ನಿಮ್ಮ ಜೊತೆ ಇರುತ್ತೇನೆ ಎಂದರು.
ಸಾಮಾನ್ಯ ಕುಟುಂಬದಿಂದ ಬಂದ ನನಗೆ ಒಂದು ಅವಕಾಶ ಕೊಟ್ಟರೆ, ದಾವಣಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಾಕಷ್ಟು ಯೋಜನೆಗಳಿವೆ ಎಂದರು.
ನಾನು ನೂರಾರು ಐಎಎಸ್ ಅಧಿಕಾರಿಗಳನ್ನು ಸೃಷ್ಟಿ ಮಾಡಿದ್ದೇನೆ. ಹಾಗೆಯೇ ರಾಜಕೀಯದಲ್ಲೂ ನೂರಾರು ನಾಯಕರನ್ನು ತಯಾರಿಸಿ ರಾಜಕೀಯದಲ್ಲಿ ಬದಲಾವಣೆ ತರುತ್ತೇನೆ ಎಂದ ಅವರು, 30 ವರ್ಷ ರಾಜಕಾರಣ ಮಾಡಿದವರು ಏನು ಮಾಡಿದ್ದಾರೆ ? ಎಂದು ಪ್ರಶ್ನಿಸಿದರು.
ರಾಜಕೀಯಕ್ಕೆ ಬರುವವರನ್ನು ತುಳಿಯಲಾಗುತ್ತಿದೆ ಯಾರನ್ನೂ ಬೆಳೆಸಿಲ್ಲ, ಬೆಳೆಯಲೂ ಬಿಡಲ್ಲ. ಹಾಗಾಗಿ ನಾನು ಸ್ವಾಭಿಮಾನದ ಹೋರಾಟ ಶುರು ಮಾಡಿದ್ದೇನೆ. ಆದ್ದರಿಂದ ನನ್ನ ಕೈಬಲಪಡಿಸಿ ಎಂದು ಮನವಿ ಮಾಡಿದರು.
ಯಾವ ಹಳ್ಳಿಗೂ ಭೇಟಿ ಆಗದೇ ಟಿಕೆಟ್ ಪಡೆದು, ಈಗ ನಿಮ್ಮ ಬಳಿ ಮತ ಕೇಳುತ್ತಿದ್ದಾರೆ. ಇಂಥವರು ಜನ ಸೇವೆ ಮಾಡಲು ಟಿಕೆಟ್ ತಂದಿಲ್ಲ, ಆಸ್ತಿ ಉಳಿಸಿಕೊಳ್ಳಲು ಟಿಕೆಟ್ ತಂದಿದ್ದಾರೆ. ಪ್ರಜ್ಞಾವಂತರು, ವಿದ್ಯಾವಂತರು ಇವರಿಗೆ ಪಾಠ ಕಲಿಸಬೇಕು ಎಂದು ಹೇಳಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಇತಿಹಾಸ ಸೃಷ್ಟಿಸೋಣ. ಆದ್ದರಿಂದ ಹೊನ್ನಾಳಿ ತಾಲ್ಲೂಕಿನಿಂದ ನನಗೆ ನೀವೆಲ್ಲರೂ ಸೇರಿ 75 ಸಾವಿರ ಮತಗಳ ಅಂತರದಲ್ಲಿ ಮುನ್ನಡೆಸಿ ಎಂದರು.
ನನಗೆ ಸಿಲಿಂಡರ್ ಗುರುತು ಸಿಕ್ಕಿದೆ. ಪ್ರತಿಯೊಂದು ಮನೆಯಲ್ಲಿಯೂ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಇಂಥ ಚಿಹ್ನೆ ಸಿಕ್ಕಿರುವುದು ಖುಷಿಯ ವಿಚಾರ. ನನ್ನದು ಕ್ರಮ ಸಂಖ್ಯೆ 28. ಇಲ್ಲಿನ ಸಿಲಿಂಡರ್ ಗುರುತಿಗೆ ಮತ ನೀಡಿ ಗೆಲ್ಲಿಸಿ ಲೋಕಸಭೆಗೆ ಕಳುಹಿಸಿ ಎಂದು ಮನವಿ ಮಾಡಿದರು.