ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಪರ ಪ್ರಚಾರದಲ್ಲಿ ಮಾಜಿ ಸಂಸದ ಕೆ.ಸಿ. ಕೊಂಡಯ್ಯ
ದಾವಣಗೆರೆ, ಏ. 25 – ದಾವಣಗೆರೆ ಇನ್ನಷ್ಟು ಅಭಿವೃದ್ಧಿಯಾಗಬೇಕೆಂದರೆ ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸುವಂತೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮನವಿ ಮಾಡಿದರು.
ಮಹಾನಗರ ಪಾಲಿಕೆಯ 10ನೇ ವಾರ್ಡ್ನಲ್ಲಿ ಇಂದು ಏರ್ಪಾಡಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಭಾ ಮಲ್ಲಿಕಾರ್ಜುನ್ ವಿದ್ಯಾವಂತೆಯಾಗಿರುವುದರಿಂದ ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ಇನ್ನಷ್ಟು ಅಭಿವೃದ್ಧಿಗೆ ಒತ್ತು ನೀಡುವರು ಎಂದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ. ನಮ್ಮ ಸರ್ಕಾರ ಭರವಸೆಯನ್ನು ಈಡೇರಿಸಿದ ತೃಪ್ತಿ ಹೊಂದಿದ್ದು, ನಾವುಗಳು ಮತ್ತಷ್ಟು ಸ್ಪೂರ್ತಿಯಿಂದ ಕೆಲಸ ಮಾಡಲು ನಿಮ್ಮಗಳ ಬೆಂಬಲ ಅವಶ್ಯಕತೆ ಇದ್ದು, ನೀವುಗಳು ನಮಗೆ ಹೆಚ್ಚಿನ ಮತಗಳನ್ನು ನೀಡುವ ಮೂಲಕ ನಮ್ಮನ್ನು ಬೆಂಬಲಿಸಿ ಎಂದರು.
ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಮಾತನಾಡಿ, ಪ್ರಭಾ ಮಲ್ಲಿಕಾರ್ಜುನ್ ಅವರು ಎಸ್.ಎಸ್.ಟ್ರಸ್ಟ್ ಮೂಲಕ ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದು, ಅವರಿಗೆ ಜನರ ಸಂಕಷ್ಟ ಅರ್ಥ ಮಾಡಿಕೊಳ್ಳುವ ಗುಣ ಇದ್ದು, ಅವರನ್ನು ನೀವು ಬಹುಮತದಿಂದ ಗೆಲ್ಲಿಸಿದರೆ, ದಾವಣಗೆರೆ ಘನತೆಯನ್ನು ಹೆಚ್ಚಿಸುವರು ಎಂದರು.
ವಾರ್ಡ್ನ ಮುಖಂಡ ಸತೀಶ್ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಅನಿತಾಬಾಯಿ, ದೂಡಾ ಮಾಜಿ ಅಧ್ಯಕ್ಷ ಮಾಲತೇಶ್ ರಾವ್, ಮೇಯರ್ ವಿನಾಯಕ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಕಾಂಗ್ರೆಸ್ ಮುಖಂಡ ಬಾಬುರಾವ್ ಸಾಳಂಕಿ, ಮಹಿಳಾ ಕಾಂಗ್ರೆಸ್ನ ಮಂಜಮ್ಮ, ಉಮೇಶ್ ರಾವ್ ಸಾಳಂಕಿ, ಗೌಡ್ರು ಚನ್ನಬಸಪ್ಪ, ಕ್ಯಾಪ್ಟನ್ ನಾಗರಾಜ್, ಗುರುರಾಜ್, ಮರಿಯಪ್ಪ ಮತ್ತಿತರರಿದ್ದರು.