ಜೀವನದಲ್ಲಿ ಒದಗಿ ಬಂದ ಅನುಕೂಲ ಹಾಗೂ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು.
– ಎಚ್. ಬಿಲ್ಲಪ್ಪ, ವಿಶ್ರಾಂತ ನ್ಯಾಯಮೂರ್ತಿ
ದಾವಣಗೆರೆ, ಏ.24- ನಮ್ಮ ಆಲೋಚನಾ ಶಕ್ತಿ ಬದಲಾಯಿಸಿಕೊಂಡಾಗ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ರಾಜ್ಯ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಹೇಳಿದರು.
ವಕೀಲರ ಸಂಘದಿಂದ ನಗರದ ಜಿಲ್ಲಾ ಕೋರ್ಟ್ ಭವನದಲ್ಲಿ ಬುಧವಾರ ನಡೆದ 133ನೇ ಅಂಬೇಡ್ಕರ್ ಜಯಂತಿ ಅಂಗವಾಗಿ `ಅಂಬೇಡ್ಕರ್ ಮತ್ತು ಸಂವಿಧಾನ’ ಕುರಿತು 8ನೇ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಸಮಾಜದ ಶಾಂತಿ, ಸಮಾನತೆ ಮತ್ತು ಮಾನವಿಯತೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸ್ವಾಸ್ಥ್ಯ ಸಮಾಜಕ್ಕಾಗಿ ಶ್ರಮಿಸಿದರು ಎಂದು ಹೇಳಿದರು.
ಅಂದು ಮಹರ್ ಜಾತಿಯಲ್ಲಿ ಅಂಬೇಡ್ಕರ್ ಜನಿಸದೇ ಇದ್ದಿದ್ದರೆ, ನಮ್ಮ ದೇಶಕ್ಕೆ ಶ್ರೇಷ್ಠ ಸಂವಿಧಾನ ಸಿಗುತ್ತಿರಲಿಲ್ಲ ಎಂದ ಅವರು, ಇಂತಹ ಶ್ರೇಷ್ಠ ಮಹಾನ್ ನಾಯಕರ ಚಿಂತನೆಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜಕ್ಕೆ ಒಳಿತು ಮಾಡುವ ಹಾಗೂ ಪರಿಸರ ಸೌಖ್ಯದ ಬಗ್ಗೆ ಚಿಂತಿಸುವವನು ಮಹಾನ್ ನಾಯಕನಾಗಲು ಸಾಧ್ಯ. ಆದುದರಿಂದ ಅಹಂಕಾರ ಗುಣ ತ್ಯಜಿಸಿ, ಓಂಕಾರಿಗಳಾಗುವಂತೆ ಆಶಿಸಿದರು.
ನಿರಂತರ ಅಧ್ಯಯನದಿಂದ ಅಪಾರ ವಿದ್ವತ್ತು ಗಳಿಸಿದ್ದ ಅಂಬೇಡ್ಕರ್ ಸಾಕಷ್ಟು ಪದವಿಗಳನ್ನು ಪಡೆದಿದ್ದರು ಹಾಗೂ ದೇಶದ ಮೊದಲ ಕಾನೂನು ಮಂತ್ರಿಯೂ ಆಗಿದ್ದರು ಎಂದು ಹೇಳಿದರು.
ಒಂದು ಜನಾಂಗಕ್ಕೆ ಉತ್ವಲ ಭವಿಷ್ಯ ಕೊಡುವ ನಿಟ್ಟಿನಲ್ಲಿ ಅಂಬೇಡ್ಕರ್ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದರು. ಆದ್ದರಿಂದ ಸಮಾಜ ಸದೃಢವಾಗಲು ಪ್ರತಿಯೊಬ್ಬರು ಅಕ್ಷರಸ್ಥರಾಗಬೇಕು ಎಂದು ಹೇಳಿದರು.
ಈ ದಿನಗಳಲ್ಲೂ ಅಂಬೇಡ್ಕರ್ ಫೋಟೋ ಮನೆಯಲ್ಲಿಡಲು ಹಿಂಜರಿಯುತ್ತಾರೆ. ಅಂತವರು ಒಂದು ಸಾರಿ ಅವರ ಜೀವನ ಚರಿತ್ರೆ ಓದಿದರೇ ಸಮಾಜಕ್ಕೆ ನೀಡಿದ ಅವರ ನಿಸ್ವಾರ್ಥ ಕೊಡುಗೆ ತಿಳಿಯಲಿದೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶ ಜೆ.ವಿ. ವಿಜಯಾನಂದ, ಕಾನೂನು ಅಧಿಕಾರಿ ಎ.ಎಂ ಬಸವರಾಜು, ಸರ್ಕಾರಿ ಅಭಿಯೋಜಕ ಬಿ. ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್ ಮತ್ತು ಇತರರು ಇದ್ದರು.