ದಾವಣಗೆರೆ, ಏ.24- ಲೋಕಸಭಾ ಚುನಾವಣೆ ಹಿನ್ನೆಲೆ ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವಿದ್ಯಾ ರ್ಥಿಗಳ ಸಮಸ್ಯೆಗಳನ್ನು ಚರ್ಚಿಸಲು ಎಸ್ಯುಸಿಐ ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿ ಅಣಬೇರು ತಿಪ್ಪೇಶ್ ಅವರಿಗೆ ವಿದ್ಯಾರ್ಥಿ ಪ್ರಣಾಳಿಕೆ ನೀಡಿತು.
ಪ್ರಣಾಳಿಕೆ ನೀಡಿ ಮಾತನಾಡಿದ ಸಂಘಟನೆಯ ಜಿಲ್ಲಾಧ್ಯಕ್ಷರಾದ ಪೂಜಾ ನಂದಿಹಳ್ಳಿ ಅವರು, ಅಪ್ರಜಾತಾಂತ್ರಿಕವಾಗಿರುವ ಎನ್ಇಪಿ ಶಿಕ್ಷಣ ನೀತಿ ಹಿಂಪಡೆಯಬೇಕು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸ ಬೇಕೆಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಚರ್ಚಿಸಲು ಮನವಿ ಮಾಡಿದರು.
ಎಲ್ಲ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಾ ಜಾತಿ-ಧರ್ಮದ ವಿಷಯವನ್ನು ಸಮಾಜದ ಮುನ್ನೆಲೆಗೆ ತರುತ್ತಿವೆ ಆದ್ದರಿಂದ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆಯಿಂದ ತಮ್ಮ ಸಮಸ್ಯೆಗಳು ಸಂಸತ್ತಿನಲ್ಲಿ ಚರ್ಚೆಯಾಗುವಂತೆ ಧ್ವನಿ ಎತ್ತಬೇಕಿದೆ ಎಂದರು.
ಕ್ರಾಂತಿಕಾರಿಗಳಾದ ಭಗತ್ ಸಿಂಗ್ ಹಾಗೂ ನೇತಾಜಿಯವರ ಉತ್ತರಾಧಿಕಾರಿಗಳಾಗಿ ಅನ್ಯಾಯ ಮತ್ತು ಅಸತ್ಯದ ವಿರುದ್ಧ ಹೋರಾಡುವ ಉದಾತ್ತ ರಾಜಕೀಯ ಬೇಕಿದ್ದು, ಈ ನಿಟ್ಟಿನಲ್ಲಿ ಪ್ರಜಾತಾಂತ್ರಿಕ, ವೈಜ್ಞಾನಿಕ, ಧರ್ಮನಿರಪೇಕ್ಷ ಶಿಕ್ಷಣ ಖಾತ್ರಿಪಡಿಸುವಂತೆ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.