ಹೊನ್ನಾಳಿ, ಏ.23- ಬಿರುಗಾಳಿ ಸಹಿತ ಸುರಿದ 2-3 ಮಳೆಗೆ ತಾಲ್ಲೂಕಿನ ಕೆಲವು ಗ್ರಾಮಗಳ ಪಪ್ಪಾಯ ಮತ್ತು ಬಾಳೆ ಬೆಳೆ ಹಾಳಾಗಿದೆ ಎಂದು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಜಿ.ಪಿ. ರೇಖಾ ತಿಳಿಸಿದರು.
ಬೆಳೆ ಹಾನಿಯಾಗಿರುವ ಜಮೀನುಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.
ತಾಲ್ಲೂಕಿನ ಅರಕೆರೆ, ಮಾಸಡಿ, ನರಸಗೊಂಡನಹಳ್ಳಿ, ತರಗನಹಳ್ಳಿ ಮತ್ತು ಸಿಂಗಟನಗೆರೆ ಗ್ರಾಮಗಳಲ್ಲಿನ 85 ಎಕರೆ ಬಾಳೆ, 5 ಎಕರೆ ಪಪ್ಪಾಯ ಬೆಳೆ ಗಾಳಿ ಮಳೆಗೆ ಹಾನಿಯಾಗಿದ್ದು, ಕಂದಾಯ ಮತ್ತು ತೋಟಗಾರಿಕಾ ಇಲಾಖೆಯ ವತಿಯಿಂದ ಜಂಟಿ ಸರ್ವೇ ಮಾಡಿ, ಬೆಳೆ ಹಾನಿಯಾಗಿರುವುದರ ಮಾಹಿತಿಯನ್ನು ಜಿಲ್ಲಾ ಮುಖ್ಯ ಕಚೇರಿಗೆ ಕಳುಹಿಸಿಕೊಡಲಾಗುವುದು. ನಂತರ ಎನ್.ಡಿ.ಆರ್.ಎಫ್. ಗೈಡ್ ಲೈನ್ಸ್ ಆಧಾರದ ಮೇಲೆ ಬೆಳೆ ಪರಿಹಾರವನ್ನು ರೈತರಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಕುಮಾರ್ ನಾಯ್ಕ್ ಮತ್ತು ರೈತರು ಉಪಸ್ಥಿತರಿದ್ದರು.