70 ವರ್ಷಗಳಲ್ಲಿ ಆಗದ ಕೆಲಸಗಳನ್ನು ಮೋದೀಜಿ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ

70 ವರ್ಷಗಳಲ್ಲಿ ಆಗದ ಕೆಲಸಗಳನ್ನು  ಮೋದೀಜಿ 10 ವರ್ಷಗಳಲ್ಲಿ ಮಾಡಿ ತೋರಿಸಿದ್ದಾರೆ

ಮಲೇಬೆನ್ನೂರು : ಮಹಿಳಾ ಸಮಾವೇಶದಲ್ಲಿ ಯುವ ವಾಗ್ಮಿ ಹಾರಿಕಾ ಮಂಜುನಾಥ್

ಮಲೇಬೆನ್ನೂರು, ಏ. 22- ಸರಿಯಾದ ನಾಯಕತ್ವದಿಂದ ಒಂದು ದೇಶ ಪ್ರಗತಿ ಸಾಧಿಸಲು ಸಾಧ್ಯ. ಅಂತಹ ನಾಯಕ ನರೇಂದ್ರ ಮೋದಿ ಅವರಿಂದಾಗಿ ಭಾರತ ವಿಕಸಿತಗೊಂಡಿದೆ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.

ಅವರು ಭಾನುವಾರ ಸಂಜೆ ಪಟ್ಟಣದ ನೀರಾವರಿ ಇಲಾಖೆಯ ಮೈದಾನದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.

70 ವರ್ಷಗಳಲ್ಲಿ ಆಗದ ಕೆಲಸವನ್ನು ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ಮಾಡಿ ತೋರಿಸಿ ದ್ದಾರೆ. ಕಾಶ್ಮೀರದಲ್ಲಿ 370ನೇ ವಿಧಿ ಜಾರಿಗೊಳಿಸಿದ್ದು ಮೋದಿ ಅವರ ಸಾಮರ್ಥ್ಯದ ನಾಯಕತ್ವಕ್ಕೆ ಸಾಕ್ಷಿ ಯಾಗಿದೆ. ಅವರು ನಮಗೆ ಚಂಬು ನೀಡಿಲ್ಲ. ಅಕ್ಷಯ ಪಾತ್ರೆ ನೀಡಿದ್ದಾರೆ. 10 ವರ್ಷಗಳಲ್ಲಿ ಮೋದಿ ಅವರು ಟ್ರೈಲರ್ ಮಾತ್ರ ತೋರಿಸಿದ್ದಾರೆ. ಅಬಿ ಪಿಚ್ಚರ್ ಬಾಕಿ ಹೈ ಎಂದು ಹಾರಿಕಾ ಮಂಜುನಾಥ್ ಹೇಳಿದರು.

ದೇಶಕ್ಕಾಗಿ ನಿರಂತರ ದುಡಿಯುತ್ತಿರುವ ಮೋದಿ ಅವರ ನಾಯಕತ್ವವನ್ನು ಇನ್ನಷ್ಟು ಬಲಗೊಳಿಸುವ ಅವಕಾಶ ಈ ಚುನಾವಣೆ ಮೂಲಕ ನಮಗೆ ಒದಗಿ ಬಂದಿದೆ. ನಾವು – ನೀವೆಲ್ಲರೂ ಬಿಜೆಪಿಗೆ ಮತ ಹಾಕುವ ಮೂಲಕ ಭಾರತವನ್ನು ಜಗತ್ತಿನ ಶಕ್ತಿ ಶಾಲಿ ದೇಶವನ್ನಾಗಿ ಮಾಡಲು ಸಂಕಲ್ಪ ಮಾಡೋಣ ಎಂದರು.

ಹೆಣ್ಣು ಮಕ್ಕಳ ಅಭಿವೃದ್ಧಿ ಮತ್ತು ರಕ್ಷಣೆ ಬಗ್ಗೆ ವಿಶೇಷವಾದ ಕಾಳಜಿ ಹೊಂದಿರುವ ಮೋದಿ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಅತಿ ಹೆಚ್ಚಿನ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮಾಡಿದ ಸಾಧನೆಗಳನ್ನು ಪುಸ್ತಕದ ಮೂಲಕ ನಮಗೆ ತೋರಿಸಿದ್ದಾರೆ. ಈ ಬಾರಿ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸುವ ಮೂಲಕ ಮಹಿಳೆ ಅಬಲೆಯಲ್ಲ ಸಬಲೆ ಎಂಬುದನ್ನು ತೋರಿಸೋಣ ಎಂದು ಹಾರಿಕಾ ಮಂಜುನಾಥ್ ಮಹಿಳೆಯರಲ್ಲಿ ಮನವಿ ಮಾಡಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರಿ ಶ್ರೀಮತಿ ಅಶ್ವಿನಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಹರಿಹರ ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ, ಅಂಬುಜಾ, ಬೆಳ್ಳೂಡಿ ಗೀತಮ್ಮ, ಪುರಸಭೆ ಸದಸ್ಯರಾದ ಬೆಣ್ಣೆಹಳ್ಳಿ ಸಿದ್ದೇಶ್, ಓ.ಜಿ. ಕುಮಾರ್, ಜಿಗಳೇರ ಹಾಲೇಶಪ್ಪ, ಆನಂದಚಾರ್, ಕೊಮಾರನಹಳ್ಳಿ ಸುನೀಲ್ ಸೇರಿದಂತೆ ನೂರಾರು ಮಹಿಳೆಯರು ಭಾಗವಹಿಸಿದ್ದರು. ಶ್ರೀಮತಿ ರತ್ನಮ್ಮ ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು.

error: Content is protected !!