ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್
ದಾವಣಗೆರೆ, ಏ.22- ನನ್ನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡವರು ಮತ್ತು ಗುರುತಿಸಿಕೊಂಡವರನ್ನು ಕಾಂಗ್ರೆಸ್ ಪಕ್ಷಾಂತರ ಮಾಡಿಕೊಳ್ಳುತ್ತಿದೆ ಎಂದು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ಇಲ್ಲಿನ ಭಾಷಾ ನಗರದಲ್ಲಿ ಮುಸ್ಲಿಂ ಬಾಂಧವರು ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮವರೇ ನಮ್ಮನ್ನು ಬೆಳೆಯಲು ಬಿಡದೇ ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ನನ್ನ ಜೊತೆ ಇದ್ದ ಮುಖಂಡರೆಲ್ಲರೂ ಕಾಂ ಗ್ರೆಸ್ಗೆ ಸೇರುತ್ತಿದ್ದಾರೆ. ನನ್ನ ಬಿಟ್ಟು ಹೋದವರಿಗೆ ಸ್ವಾಭಿಮಾನವಿಲ್ಲ. ನನ್ನದು ಸ್ವಾಭಿಮಾನದ ಹೋರಾಟ, ಜನರು ನೀಡಿದ ಭರವಸೆಯಿಂದಲೇ ನಾನು ಪಕ್ಷೇತರನಾಗಿ ನಿಂತಿದ್ದೇನೆ ಎಂದರು.
ನಾನು ನಾಮಪತ್ರ ಸಲ್ಲಿಸಲು ಹೋದಾಗ ಅಲ್ಲಿ ಬಿಜೆಪಿಯ ಮುಖಂಡರು, ಪೊಲೀಸರು ಹಾಗೂ ಜಿಲ್ಲಾಧಿಕಾರಿ ಕಚೇರಿ ಬೋರ್ಡ್ ಇತ್ತು. ಅದನ್ನು ಎಡಿಟ್ ಮಾಡಿ ಬಿಜೆಪಿ ಸಂಸದರ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದೇನೆ ಎಂದು ಸುಳ್ಳು ವದಂತಿ ಹಾಗೂ ಅಪಪ್ರಚಾರ ಮಾಡಿದ್ದಾರೆ. ಇಂತಹ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗುಡುಗಿದರು.
ಹೆಗಡೆ ನಗರದ ಪರಿಸ್ಥಿತಿ ಯಾರು ಸುಧಾರಿಸುತ್ತಾರೆ. ರಸ್ತೆ ಇರುವ ಸರ್ವೇ ನಂಬರ್ ತೋರಿಸಿ ಮೂಲಭೂತ ಸೌಲಭ್ಯಗಳೇ ಇಲ್ಲದ ಜಾಗ ಕೊಟ್ಟು ಮೋಸ ಮಾಡಿದ್ದಾರೆ ಎಂದರು.
ನಾನು ಅಧಿಕಾರದ ಆಸೆಯಿಂದಾಗಿ ರಾಜಕೀಯಕ್ಕೆ ಬಂದಿಲ್ಲ, ಸ್ವಂತ ಹಣದಿಂದ 10 ಜನರಿಗೆ ಸಹಾಯ ಮಾಡಬಲ್ಲೆ, ಆದ್ರೆ ಸಂಸದನಾದರೆ ಲಕ್ಷಾಂತರ ಜನರಿಗೆ ಅನುಕೂಲ ಮಾಡುತ್ತೇನೆ ಎಂದರು.
ಈ ವೇಳೆ ಆರೀಫ್ ಸೇರಿದಂತೆ ಮುಸ್ಲಿಂ ಸಮುದಾಯದ ನೂರಾರು ಮಂದಿ ಪಾಲ್ಗೊಂಡಿದ್ದರು.