ನೇಹಾ ಹತ್ಯೆ ಖಂಡಿಸಿ ಮಲೇಬೆನ್ನೂರಿನಲ್ಲಿ ಪ್ರತಿಭಟನೆ

ನೇಹಾ ಹತ್ಯೆ ಖಂಡಿಸಿ ಮಲೇಬೆನ್ನೂರಿನಲ್ಲಿ ಪ್ರತಿಭಟನೆ

ಮಲೇಬೆನ್ನೂರು, ಏ.21- ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಹಿಂದೂ ಸಮುದಾಯಕ್ಕೆ ಸೇರಿದ ಯುವತಿ ಹತ್ಯೆ ನಡೆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮ್ಮನಿದ್ದಾರೆ, ಗೃಹಮಂತ್ರಿ ಜಿ. ಪರಮೇಶ್ವರ ಅವರು ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಸತೀಶ್‌ ಪೂಜಾರಿ ಖಂಡಿಸಿದರು.

ಭಾನುವಾರ ಪಟ್ಟಣದ ಮುಖ್ಯವೃತ್ತದಲ್ಲಿ ಮೃತ ನೇಹಾ ಹಿರೇಮಠ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು.

ಹಿಂದೂ ಯುವತಿ ಹತ್ಯೆ ಮಾಡಿದ ವ್ಯಕ್ತಿ ಕುಟುಂಬಕ್ಕೆ ಪೊಲೀಸ್‌ ರಕ್ಷಣೆ ನೀಡುತ್ತಿದ್ದಾರೆ. ಮಲೇಬೆನ್ನೂರು ಸೇರಿದಂತೆ ಹಲವೆಡೆ ಹಿಂದೂ ಯುವಕರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಹಿಂದೂ ಸಮಾಜ ಇಂತಹ ಘಟನೆಗಳನ್ನು ಸಹಿಸುವುದಿಲ್ಲ. ಯುವತಿಯರು ಆತ್ಮರಕ್ಷಣೆಗೆ ಚೂರಿ ಹಿಡಿದು ಶಾಲೆಗೆ ಹೋಗಬೇಕಾಗುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಮರು ಹಿಂದೂಗಳೊಂದಿಗೆ ಸಾಮರಸ್ಯ, ಸಹಬಾಳ್ವೆ ಜೀವನ ನಡೆಸಬೇಕು ಎಂದ ಸತೀಶ್ ಅವರು, ಸರ್ಕಾರ ತಪ್ಪಿಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಹತ್ಯೆಗೀಡಾದ ಯುವತಿ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.

ನಂತರ ನಾಡ ಕಛೇರಿಗೆ ತೆರಳಿ ಉಪ ತಹಶೀಲ್ದಾರ್ ಆರ್.ರವಿ ಅವರಿಗೆ ಮನವಿ ಅರ್ಪಿಸಿದರು. ಬಿಜೆಪಿ ಮುಖಂಡ ಚಂದ್ರಶೇಖರ್‌ ಪೂಜಾರ್‌, ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್‌, ಪುರಸಭೆ ಸದಸ್ಯ ಬೆಣ್ಣೆಹಳ್ಳಿ ಸಿದ್ದೇಶ್,‌  ಭೋವಿ ಮಂಜಣ್ಣ, ಬೇಕರಿ ರಾಘವೇಂದ್ರ, ಪೂಜಾರ್ ಗಂಗಾಧರ್, ಕೊಮಾರನಹಳ್ಳಿ ಸುನೀಲ್, ನಿರಂಜನ್ (ಪಿಂಟು) ಸೇರಿದಂತೆ ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು. ಪೊಲೀಸರು ಭದ್ರತೆ ಒದಗಿಸಿದ್ದರು.

error: Content is protected !!