ಮಲೇಬೆನ್ನೂರು, ಏ. 17- ಹೊಳೆಸಿರಿಗೆರೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ರಾಮ ನವಮಿ ಅಂಗವಾಗಿ ಬುಧವಾರ ಬೆಳಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ರಥಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ಗೋವಿಂದಾ ಗೋವಿಂದಾ ಎಂಬ ಜಯ ಘೋಷಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು. ಈ ವೇಳೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ, ಜವಳ, ಉರುಳುಸೇವೆ ಸೇರಿದಂತೆ ಇತ್ಯಾದಿ ಸೇವಾ ಕಾರ್ಯಕ್ರಮಗಳು ನಡೆದವು. ಸಂಜೆ ಶ್ರೀ ಆಂಜನೇಯ ಸ್ವಾಮಿಯಿಂದ ಬೇಟೆಯಾಡುವ ಸಂಪ್ರದಾಯ ನಡೆಯಿತು.
ಗುರುವಾರ ಮಧ್ಯಾಹ್ನ 12ಕ್ಕೆ ಕಂಕಣ ವಿಸರ್ಜನೆ, ನಂತರ ಓಕುಳಿ ಕಾರ್ಯಕ್ರಮ, ಸಂಜೆ 5 ಗಂಟೆಗೆ ಸ್ವಾಮಿಯ ಮುಳ್ಳೋತ್ಸವ, ಸಂಜೆ 6 ಗಂಟೆಗೆ ಭೂತನ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ ಎಂದು ಗ್ರಾಮದ ಕೆ. ರುದ್ರೇಶ್ ತಿಳಿಸಿದ್ದಾರೆ.