ಹರಪನಹಳ್ಳಿ, ಏ.15- ಅಂಬೇಡ್ಕರ್ ಅವರ ವಿಚಾರ ಧಾರೆ ಮತ್ತು ತತ್ವಾದರ್ಶಗಳಿಂದ ಸುಂದರ ಸಮಾಜ ನಿರ್ಮಿಸಲು ಸಾಧ್ಯ ಎಂದು ಪುರಸಭೆ ಸದಸ್ಯ ಎಚ್. ಕೊಟ್ರೇಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಬಡಾವಣೆಯಲ್ಲಿ ಭಾನುವಾರ 133ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಕೇವಲ ಸಂವಿಧಾನ ಶಿಲ್ಪಿ ಅಷ್ಟೇ ಅಲ್ಲ, ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ ಮತ್ತು ಸಮಾಜ ಸುಧಾರಕರೂ ಆಗಿದ್ದರು ಎಂದು ತಿಳಿಸಿದರು.
ಬಾಬಾ ಸಾಹೇಬರು ತಮ್ಮ ಪ್ರಜಾಪ್ರಭುತ್ವ ಕಲ್ಪನೆಯಿಂದ ಸುಖಿ ರಾಜ್ಯವನ್ನಾಗಿಸುವ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾತನಾಡಿ, ಬಾಲ್ಯದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದ ಅಂಬೇಡ್ಕರ್, ಭವ್ಯ ಭಾರತದ ಕನಸು ಕಾಣುತ್ತಾ ದೇಶಕ್ಕೆ ಉತ್ತಮ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.
ನಾವು ಸಂವಿಧಾನವನ್ನು ಕಾಪಾಡಿಕೊಳ್ಳುವ ಜತೆಗೆ ಸಂವಿಧಾನದಡಿ ನಾವೆಲ್ಲಾ ಸ್ವತಂತ್ರ ಜೀವನ ನಡೆಸೋಣ ಎಂದರು.
ವಾಲ್ಮೀಕಿ ಸಮಾಜದ ಉಪಾಧ್ಯಕ್ಷ ಮಂಡಕ್ಕಿ ಸುರೇಶ್ ಮಾತನಾಡಿ, ಅಂಬೇಡ್ಕರ್ ಅವರು ಅಸ್ಪೃಶ್ಯರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.
ಈ ವೇಳೆ ಮುಖಂಡರಾದ ಸಿ. ಬಸವರಾಜ್, ಸಾಸ್ವಿಹಳ್ಳಿ ಅಂಜಿನಪ್ಪ, ದೊಡ್ಡಮನಿ ನಾಗರಾಜ್, ದೊಡ್ಡಮನಿ ರಾಮಪ್ಪ, ಎಚ್. ಪಿರಂಗಿ ವಿನೋದ, ಪರಶುರಾಮಪ್ಪ, ಎಚ್.ಪಿ. ಉಚ್ಚೆಂಗೆಪ್ಪ, ಡಿ. ಕರಿಯಪ್ಪ, ಯಡಿಹಳ್ಳಿ ವಿಜಯಕುಮಾರ್, ಅಣ್ಣಪ್ಪ, ಸಂದೀಪ್, ಸಂಜೀವ್ ಕುಮಾರ್, ದುರುಗೇಶ್ ಪೂಜಾರ್, ಸಾಗರ್ ಮತ್ತು ಇತರರು ಇದ್ದರು.