ಕಲಾವಿದರಿಗೆ ಅನುಕೂಲವಾಗುವ ದೃಷ್ಟಿಯಿಂದ ಥೀಮ್ ಪಾರ್ಕ್ಗೆ ಬಹುಬೇಗ ರಸ್ತೆ ನಿರ್ಮಾಣ ಆಗಬೇಕಿದೆ.
– ಬಾ.ಮ. ಬಸವರಾಜಯ್ಯ, ಹಿರಿಯ ಪತ್ರಕರ್ತ
ದಾವಣಗೆರೆ, ಏ.15- ಕಲಾವಿದರಿಗೆ ಪೌರಾಣಿಕ ಚರಿತ್ರೆಯ ಜತೆಗೆ ವರ್ತಮಾನ ಚರಿತ್ರೆಯ ತಿಳಿವಳಿಕೆ ಇರಬೇಕು ಎಂದು ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಪ್ರೆಗ್ಮೆಂಟ್ಸ್ ಆಫ್ ಇಲ್ಲ್ಯೂಷನ್’ ಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲೆ, ಸಂಗೀತ ಮತ್ತು ಸಾಹಿತ್ಯ ಇವೆಲ್ಲವೂ ಒಂದಕ್ಕೊಂದು ಪೂರಕವಾದ ಅಂಶಗಳಾಗಿವೆ ಆದ್ದರಿಂದ ಕಲೆಯಲ್ಲಿ ಆಸಕ್ತಿ ಹೊಂದಿದವರು ಸಾಹಿತ್ಯಕ್ಕೂ ಹೆಚ್ಚಿನ ಒಲವು ತೋರಿಸಬೇಕು ಎಂದರು.
ಇಲ್ಲಿನ ಮಲ್ಲಾಬಾದಿ ಶಂಭುಲಿಂಗಪ್ಪ ಅವರು ತಮ್ಮ ಚಿತ್ರಕಲಾ ಪ್ರತಿಭೆಯಿಂದ ಮೈಸೂರು ಮಹಾರಾಜರನ್ನೇ ಮೆಚ್ಚಿಸಿದ್ದರು. ಇಂತಹ ಕಲಾವಿದರ ಹೆಸರು, ಹೆಚ್ಚು ಬೆಳಕಿಗೆ ಬರದೆ ಇರುವುದು ಬೇಸರದ ವಿಚಾರ ಎಂದು ಆತಂಕಪಟ್ಟರು.
ಕಲಾಕ್ಷೇತ್ರದಲ್ಲಿ ಬೆಳೆಯುವ ಕಲಾವಿದರಿಗಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ಚಿತ್ರ ಪ್ರದರ್ಶನ ಕಾರ್ಯಕ್ರಮ ನಡೆಸುವಂತೆ ಸಲಹೆ ನೀಡಿದರು.
ಹಳೇ ಅಧ್ಯಾಪಕರ ಸಹಾಯದಿಂದ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚು ಕಲಿಕೆಯಲ್ಲಿ ತೊಡಗುವ ಮೂಲಕ ಕಾಲೇಜನ್ನು ಪ್ರವಾಸಿ ತಾಣದ ಹಾಗೆ ಮಾಡಲು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಪನೆ ಮತ್ತು ಆಲೋಚನೆಗಳು ಅನಿಮೇಷನ್ ಕಲೆಗೆ ಸಹಾಯಕವಾಗಿದೆ ಎಂದು ಹೇಳಿದರು.
ಚಿತ್ರಕಲಾ ಕ್ಷೇತ್ರ ಸದಾ ಯಶಸ್ಸು ಕಾಣುವ ದೃಷ್ಟಿಯಿಂದ ಕಾಲೇಜಿನಿಂದ ವಿಭಿನ್ನ ರೀತಿಯಲ್ಲಿ ಅನಿಮೇಷನ್ ಪ್ರದರ್ಶನ ನಡೆಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಲಸಚಿವ ಡಾ.ಯು.ಎಸ್ ಮಹಾಬಲೇಶ್ವರ ಅವರು, ಚಿತ್ರಕಲಾ ವಿದ್ಯಾರ್ಥಿಗಳು ಕಲ್ಪನಾ ಶಕ್ತಿಯನ್ನು ಬೆಳಸಿಕೊಳ್ಳುವ ಜತೆಗೆ ದೊಡ್ಡ-ದೊಡ್ದ ಕಲಾವಿದರಾಗಬೇಕು ಎಂದು ಆಶಿಸಿದರು.
ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ, ಕಲಾ ವಿಮರ್ಶಕ ದತ್ತಾತ್ರೇಯ ಎನ್. ಭಟ್, ಬೋಧನಾ ಸಹಾಯಕ ಎಸ್. ಎಚ್. ಹರೀಶ್, ರಂಗನಾಥ್ ಕುಲಕರ್ಣಿ, ಆರ್. ಅರುಣ್ ಮತ್ತು ವಿದ್ಯಾರ್ಥಿಗಳು ಇದ್ದರು.