ದಾವಣಗೆರೆ, ಏ. 7- ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಕ್ರಮ ಬಂಧನ ಖಂಡಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಸಮಿತಿ ಕಾರ್ಯಕರ್ತರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದರು.
ಇದೇ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಮಾತನಾಡಿ, ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಸಾಮಾನ್ಯ ಜನರ ಮಾತನಾಡುವ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಸಿಬಿಐ, ಐಟಿ ಮುಂತಾದ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಕೆಲಸ ಮಾಡುತ್ತಿದೆ. ಸಂವಿ ಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳನ್ನು ಅನುಸರಿ ಸುವ ಮೂಲಕ ಸರ್ಕಾರ ನಡೆಸುತ್ತಿದೆ ಎಂದು ಹೇಳಿದರು.
ದೇಶದ ಯುವಜನರು ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಬಡವರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಳಿಯಲಾಗುತ್ತಿದೆ. ಉದ್ಯೋಗ ಮಾಡುವ ಜನರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಅನೇಕ ಕೈಗಾರಿಕೆಗಳು ಅವನತಿ ಅಂಚಿನಲ್ಲಿವೆ. ಬಡತನ ಹೆಚ್ಚಾಗಿದೆ. ಆದರೂ ಸಹ ಕೇಂದ್ರ ಸರ್ಕಾರ ವಿಪಕ್ಷ ನಾಯಕರನ್ನು ಬಂಧಿಸುವಲ್ಲಿ ಮುಂದಾಗಿದೆ. ಈ ಕೂಡಲೇ ಅರವಿಂದ್ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡಬೇಕು. ದೇಶಾದ್ಯಂತ ನಿಷ್ಪಕ್ಷಪಾತ ಚುನಾವಣೆಗೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಸತ್ಯಾಗ್ರಹದಲ್ಲಿ ಆಮ್ ಆದ್ಮಿ ಪಾರ್ಟಿಯ ಪದಾಧಿಕಾರಿಗಳಾದ ಸಿ.ಆರ್. ಅರುಣ್ ಕುಮಾರ್, ಆದಿಲ್ ಖಾನ್, ರವೀಂದ್ರ ಕೆ. ಸುರೇಶ್ ಸಿಡ್ಲಪ್ಪ, ಧರ್ಮಾನಾಯ್ಕ, ಜಿ.ಹೆಚ್.ಬಸವರಾಜ್, ಮಹಮ್ಮದ್ ಯೂಸೂಫ್, ಮಲ್ಲೇಶ್ ಮತ್ತಿತರರು ಪಾಲ್ಗೊಂಡಿದ್ದರು.