ಹರಪನಹಳ್ಳಿ, ಏ. 8 – ಮೂಲ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ತಾಲ್ಲೂಕಿನ ಕೆ. ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಂಪಾಪುರ ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ.
ಈ ಸಂಬಂಧ ಗ್ರಾಮದಲ್ಲಿ ಸಭೆ ನಡೆಸಿದ ಗ್ರಾಮಸ್ಥರು ಕಳೆದ 20 ವರ್ಷಗಳಿಂದ ಬಸ್ಸಿನ ಸೌಲಭ್ಯವಿಲ್ಲ, ಗ್ರಾಮದ ಮಕ್ಕಳು ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಹೋಗಲು ವಿಫಲರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ದೂರದ ಊರಿಗೆ ಹೋಗಿ ತಡರಾತ್ರಿ ಹರಪನಹಳ್ಳಿಗೆ ಬಂದರೆ ಹಂಪಾಪುರ ಗ್ರಾಮಕ್ಕೆ ತಲುಪಲು ಸಾಧ್ಯವಿಲ್ಲ, ಬೇರೆ ಊರುಗಳಲ್ಲಿ ವಾಸ್ತವ್ಯ ಮಾಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಅಹವಾಲು ತೋಡಿಕೊಂಡಿದ್ದಾರೆ.
ರಾತ್ರಿ ಎರಡು ಕಿಲೋ ಮೀಟರ್ ದೂರ ನಡೆದುಕೊಂಡು ಬರಬೇಕಾದರೆ ಕಾಡು ಪ್ರಾಣಿಗಳ ಹಾವಳಿ ಇದೆ. ಅನಾರೋಗ್ಯಪೀಡಿತರು ಸಕಾಲಕ್ಕೆ ಆಸ್ಪತ್ರೆಗೆ ಹೋಗದೆ ಅನೇಕರು ಪ್ರಾಣ ಬಿಟ್ಟಿದ್ದಾರೆ. ಈ ಕುರಿತು ಅನೇಕ ಬಾರಿ ಜನಪ್ರತಿನಿಧಿಗಳಿಗೆ ತಿಳಿಸಿದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ. ಗ್ರಾಮಕ್ಕೆ ಬಸ್ಸೌಕರ್ಯ ಆಗುವವರೆಗೂ ಯಾರೂ ಸಹ ಮತದಾನ ಮಾಡುವುದಿಲ್ಲ ಎಂದು ಹಂಪಾಪುರ ಗ್ರಾಮಸ್ಥರು ನಿರ್ಧಾರ ಕೈಗೊಂ ಡಿದ್ದಾರೆ. ಹಂಪಾಪುರ ಗ್ರಾಮ ಹರಪನಹಳ್ಳಿ ತಾಲ್ಲೂಕಿನದ್ದಾಗಿದ್ದು, ದಾವಣಗೆರೆ ಲೋಕಸಭಾ ವ್ಯಾಪ್ತಿಗೆ ಒಳಪಡುತ್ತದೆ.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಬೋವಿ ಕರಿಬಸಪ್ಪ, ಮಾಜಿ ಸದಸ್ಯ ಸಂತೋಷ, ಮುಖಂಡರಾದ ಎಂ. ಬಾಹುಬಲಿ, ಪ್ರಗತಿಪರ ಸಂಘಟನೆ ಮುಖಂಡರಾದ ಕೆ. ಲಕ್ಷ್ಮಣ, ದಾದಾಪುರ ದುರ್ಗಪ್ಪ, ಬಣಕಾರ ಮಲ್ಲಿಕಾರ್ಜುನ, ಪೂಜಾರ ದುರ್ಗಪ್ಪ, ಡಿ. ನಾಗರಾಜ, ಹಳ್ಳಿ ಭೀರಪ್ಪ, ಹಳ್ಳಿ ಪ್ರಕಾಶ, ಅಂಗಡಿ ಬಸವರಾಜ, ಜೈನ್ಕೊಟ್ರೇಶ, ಬಣಕಾರ ಪ್ರಕಾಶ, ಒಲೇಕಾರ ಚೌಡಪ್ಪ ಮುಂತಾದವರು ಪಾಲ್ಗೊಂಡಿದ್ದರು.