ಬಿಸಿಲ ಬಿರುಸು, ಕಲಬುರಗಿಯಲ್ಲಿ 43.1 ಡಿಗ್ರಿ ತಾಪಮಾನ ದಾವಣಗೆರೆಯಲ್ಲೂ ಹೆಚ್ಚಿದ ಬಿಸಿಲ ಬೇಗೆ : ಎಚ್ಚರಿಕೆ

ಬಿಸಿಲ ಬಿರುಸು, ಕಲಬುರಗಿಯಲ್ಲಿ 43.1 ಡಿಗ್ರಿ ತಾಪಮಾನ ದಾವಣಗೆರೆಯಲ್ಲೂ ಹೆಚ್ಚಿದ ಬಿಸಿಲ ಬೇಗೆ : ಎಚ್ಚರಿಕೆ

ಬೆಂಗಳೂರು, ಏ. 7 – ರಾಜ್ಯದ ಹಲವು ಭಾಗಗಳಲ್ಲಿ ಬಿಸಿಲು ತೀವ್ರವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ 43.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬೆಂಗಳೂರಿನಲ್ಲಿ 37.6 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ನಗರದಲ್ಲಿ ಕಳೆದ ಎಂಟು ವರ್ಷಗಳಲ್ಲೇ ದಾಖಲೆಯ ತಾಪವಾಗಿದೆ.

ರಾಯಚೂರಿನಲ್ಲಿ 41.8, ಬಾಗಲಕೋಟೆಯಲ್ಲಿ 41.5, ಕೊಪ್ಪಳದಲ್ಲಿ 41.3 ಹಾಗೂ ವಿಜಯಪುರದಲ್ಲಿ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಚೆದುರಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಚಿಕ್ಕಮಗಳೂರಿನ ಪಶ್ಚಿಮ ಭಾಗಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಒಣ ಹವೆ ಮುಂದುವರೆಯಲಿದೆ.

ಉತ್ತರ ಒಳನಾಡಿನಲ್ಲಿ ತಾಪಮಾನ ವಾಡಿಕೆಗಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರಲಿದೆ. ಬೆಂಗಳೂರು ಗ್ರಾಮಾಂತರ ಹಾಗೂ ನಗರ ಜಿಲ್ಲೆ, ರಾಮನಗರ, ಶಿವಮೊಗ್ಗ, ದಾವಣಗೆರೆ, ಮೈಸೂರು, ಮಂಡ್ಯ, ಹಾಸನ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಹೆಚ್ಚಾಗಿರಲಿದೆ ಎಂದು ತಿಳಿಸಲಾಗಿದೆ.

ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಧಾರವಾಡ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ರಾತ್ರಿ ತಾಪಮಾನ ಹೆಚ್ಚಾಗಿರಲಿದೆ ಎಂದು ಇಲಾಖೆ ಹೇಳಿದೆ.

ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಗದಗ, ಕಲಬುರಗಿ, ಹಾವೇರಿ, ಧಾರವಾಡ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಬಿಸಿಗಾಳಿಯ ವಾತಾವರಣ ಇರಲಿದೆ ಎಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.

ತಲೆ ಮುಚ್ಚಿಕೊಳ್ಳದೇ ಮನೆಯಿಂದ ಹೊರ ಹೋಗಬಾರದು ಹಾಗೂ ಬಿಸಿಲ ಆಘಾತದಿಂದ ತಪ್ಪಿಸಿಕೊಳ್ಳಲು ಸಾಕಷ್ಟು ನೀರು ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

error: Content is protected !!