ನವದೆಹಲಿ, ಏ. 7 – ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಹವಾಮಾನ ಹಾಗೂ ಪರಿಸರ ಪರಿಸ್ಥಿತಿಯನ್ನೂ ಪರಿಗಣಿಸಬೇಕು ಎಂದು ಹವಾಮಾನ ಇಲಾಖೆಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ಹೇಳಿದ್ದಾರೆ.
ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಭಾರತ ತೀವ್ರ ತಾಪಮಾನದ ಪರಿಸ್ಥಿತಿ ಎದುರಿಸುತ್ತದೆ. ಅಧಿಕಾರಿಗಳು ಉತ್ತಮ ಸಿದ್ಧತೆ ಮಾಡಿಕೊಳ್ಳಲು ಹವಾಮಾನ ಇಲಾಖೆ ವಿಶೇಷ ಮುನ್ನೆಚ್ಚರಿಕೆ ನೀಡುತ್ತಿದೆ. ಆದರೆ, ಸಾರ್ವಜನಿಕ ಸಮಾವೇಶ ಹಾಗೂ ಮತದಾನದ ಸಮಯ ಬದಲಾವಣೆಯ ಪ್ರಸ್ತಾಪ ಕಳಿಸಿಲ್ಲ ಎಂದು ಮೊಹಾಪಾತ್ರ ಹೇಳಿದ್ದಾರೆ. ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆ ರೂಪಿಸುವ ವೇಳೆಗೆ ಹವಾಮಾನ ಪರಿಸ್ಥಿತಿಯನ್ನೂ ಪರಿಗಣಿಸಬೇಕು ಎಂದವರು ಸಲಹೆ ನೀಡಿದ್ದಾರೆ. ಕಡು ಬಿಸಿಲಿರುವ ಕಾರಣದಿಂದಾಗಿ ಸಮಾವೇಶ ಹಾಗೂ ಮತದಾ ನದ ವೇಳೆ ಕುಡಿಯುವ ನೀರು, ನೆರಳು ಹಾಗೂ ಬಿಸಿಲ ಬಗ್ಗೆ ಕಾಳಜಿ ವಹಿಸುವ ಬಗ್ಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದವರು ತಿಳಿಸಿದ್ದಾರೆ.
ಜನರು ಸರದಿಯಲ್ಲಿ ಕಾಯುವಾಗ ಅವರಿಗೆ ಸಮರ್ಪಕ ಪ್ರಮಾಣದ ನೀರು ಲಭ್ಯವಿರಬೇಕು. ಬಿಸಿಲಿನ ಆಘಾತಕ್ಕೆ ಸಿಲುಕಿ ಕುಸಿಯುವ ಜನರಿಗೆ ನೆರವಾಗಲು ಆರೋಗ್ಯ ಸಿಬ್ಬಂದಿ ಹಾಗೂ ಪ್ರಥಮ ಚಿಕಿತ್ಸಾ ಸೌಲಭ್ಯ ಇರಬೇಕು. ಇದು ಕನಿಷ್ಠ ಅಗತ್ಯವಾಗಿದೆ ಎಂದು ಮೊಹಾಪಾತ್ರ ಹೇಳಿದ್ದಾರೆ.
ಚುನಾವಣಾ ವೇಳಾಪಟ್ಟಿ ನಿರ್ಧರಿಸುವಾಗ ಚುನಾವಣಾ ಆಯೋಗ ಹವಾಮಾನ ಇಲಾಖೆಯನ್ನು ಸಂಪರ್ಕಿಸಿತ್ತು. ನಾವು ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ಹವಾಮಾನ ಮಾಹಿತಿ ನೀಡಿದ್ದೆವು ಎಂದವರು ಹೇಳಿದ್ದಾರೆ. ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ಪ್ರತಿದಿನ, ವಾರ, ತಿಂಗಳು ಹಾಗೂ ಋತುಮಾನಕ್ಕೆ ಅನುಗುಣವಾಗಿ ನೀಡುತ್ತಿದ್ದೇವೆ ಎಂದವರು ಹೇಳಿದ್ದಾರೆ.
ಏಪ್ರಿಲ್ – ಜೂನ್ ಅವಧಿಯಲ್ಲಿ ದೇಶಾದ್ಯಂತ ಬಿಸಿಲಿನ ತೀವ್ರತೆ ಹೆಚ್ಚಾಗಿರಲಿದೆ. ಮಧ್ಯ ಹಾಗೂ ಪಶ್ಚಿಮ ಭಾಗದಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಿರಲಿದೆ. ಮಧ್ಯ ಪ್ರದೇಶ, ಗುಜರಾತ್, ಒಡಿಶಾ, ಆಂಧ್ರ ಪ್ರದೇಶ, ಮಧ್ಯ ಮಹಾರಾಷ್ಟ್ರ, ವಿದರ್ಭ, ಮರಾಠವಾಡ, ಬಿಹಾರ ಹಾಗೂ ಜಾರ್ಖಂಡ್ಗಳಲ್ಲಿ ಬಿಸಿಗಾಳಿ ಇರಲಿದೆ. ಕೆಲ ಪ್ರದೇಶಗಳಲ್ಲಿ 20 ದಿನಗಳಿಗೂ ಹೆಚ್ಚು ಕಾಲ ಬಿಸಿಗಾಳಿ ಕಂಡು ಬರಲಿದೆ ಎಂದು ಮೊಹಾಪಾತ್ರ ಹೇಳಿದ್ದಾರೆ. ಸಾರ್ವಜನಿಕ ಸಮಾವೇಶ ಹಾಗೂ ಮತದಾನದ ಸಮಯ ಬದಲಿಸುವ ಬಗ್ಗೆ ನಾವು ಯಾವುದೇ ಸಲಹೆ ನೀಡಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ನಿರ್ಧರಿಸಬೇಕು. ಆದರೆ, ಅಗತ್ಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಎನ್.ಡಿ.ಎಂ.ಎ. ಸಾಮಾನ್ಯ ಮಾರ್ಗಸೂಚಿ ಪ್ರಕಟಿಸಿದೆ ಎಂದು ಮೊಹಾಪಾತ್ರ ಹೇಳಿದ್ದಾರೆ.