ಹಾಲಿವಾಣ : ಗಮನ ಸೆಳೆದ ಗ್ರಾಮದೇವತೆಯ ಅಂಬಾರಿ ಉತ್ಸವ

ಹಾಲಿವಾಣ : ಗಮನ ಸೆಳೆದ ಗ್ರಾಮದೇವತೆಯ ಅಂಬಾರಿ ಉತ್ಸವ

ಏಳೂರು ಭಕ್ತರು, ಬಂಧು-ಮಿತ್ರರಿಂದ ತುಂಬಿ ತುಳುಕುತ್ತಿರುವ ಗ್ರಾಮ

ಮಲೇಬೆನ್ನೂರು, ಏ.2- ಏಳು ಊರಿನ ಜನರು ಸೇರಿ ಆಚರಿಸುತ್ತಿರುವ ಹಾಲಿವಾಣದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ಗ್ರಾಮದಲ್ಲಿ ಜರುಗಿದ ಗ್ರಾಮ ದೇವತೆಯ ಅಂಬಾರಿ ಉತ್ಸವ ಎಲ್ಲರ ಗಮನ ಸೆಳೆಯಿತು.

ಬೆಳಿಗ್ಗೆ ಗ್ರಾಮದ ರಾಜಬೀದಿಗಳಲ್ಲಿ ಹಾಲಿವಾಣದ ದೇವರುಗಳಾದ ಶ್ರೀ ಕರಿಯಮ್ಮ ದೇವಿ, ಶ್ರೀ ಬೀರಲಿಂಗೇಶ್ವರ, ಶ್ರೀ ಹಾಲಸ್ವಾಮಿ, ಶ್ರೀ ಯಲ್ಲಮ್ಮ ದೇವಿ, ಶ್ರೀ ಗಲ್ಲೆಕಟ್ಟೆ ದುರ್ಗಮ್ಮ ದೇವಿ, ಶ್ರೀ ಪರಶುರಾಮ ಉತ್ಸವ ಮೂರ್ತಿಗಳು ಸೇರಿದಂತೆ ಗ್ರಾಮದ ಗೂಡುಕಟ್ಟಿಗೆ ಸೇರಿದ ಚಿಕ್ಕತಮ್ಮನಹಳ್ಳಿ ಬೆಚರ್ ಗ್ರಾಮ, ಕೊಪ್ಪ, ದಿಬ್ದದಳ್ಳಿ, ಹೊನ್ನಾಳಿ ತಾಲ್ಲೂಕಿನ ಎರೇಹಳ್ಳಿ, ಚಿಕ್ಕಹಾಲಿವಾಣ, ತಿಮ್ಮಲಾಪುರ ಗ್ರಾಮಗಳ ಉತ್ಸವ ಮೂರ್ತಿಗಳ ಮೆರವಣಿಗೆ ಕೂಡಾ ವಿಜೃಂಭಣೆಯಿಂದ ನಡೆಯಿತು.

12 ದೇವರುಗಳ ಉತ್ಸವ ಮೂರ್ತಿಗಳನ್ನು ಹೂವಿನಿಂದ ಅಲಂಕಾರಗೊಂಡಿದ್ದ 12 ಟ್ರ್ಯಾಕ್ಟರ್‌ಗಳಲ್ಲಿ ಇಟ್ಟು ಮಾಡಿದ ಮೆರವಣಿಗೆಗೆ ಡೊಳ್ಳು, ವೀರಗಾಸೆ, ಸಮಾಳ, ಹಲಗೆ, ತಮಟೆ ಕುಣಿತ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರಗು ತಂದವು.

ಸಂಜೆ 6 ಗಂಟೆಗೆ ಅಮ್ಮನ ದೇವಸ್ಥಾನದಿಂದ ಐರಣಿ ಹೊಳೆಮಠದ ಆನೆಯ ಮೇಲೆ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರಾರಂಭಿಸಿದ ಅಂಬಾರಿ ಉತ್ಸವವು ತಡರಾತ್ರಿವರೆಗೂ ವೈಭವದೊಂದಿಗೆ ನಡೆಯಿತು.

ಉಡುಪಿಯ ರುದ್ರತಾಂಡವ ತಂಡದ ಚಂಡೆ ವಾದ್ಯ ಯುವಕ – ಯುವತಿಯರು, ಮಕ್ಕಳು ಕುಣಿದು ಸಂಭ್ರಮಿ ಸುವಂತೆ ಪ್ರೇರೇಪಿಸಿತು. ಸಿಡಿಮದ್ದು ಸಿಡಿತ ಬಾನಂಗಳ ದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಆಕರ್ಷಿಸಿತು.

ಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನ ಅಂಬಾರಿ ಉತ್ಸವ ನೋಡಿ ಕಣ್ತುಂಬಿಸಿಕೊಂಡರು. ಅಷ್ಟೇ ಅಲ್ಲ, ಇದೇ ಮೊದಲ ಬಾರಿಗೆ ಗ್ರಾಮದೇವತೆಯನ್ನು ಈ ರೀತಿ ಅಂಬಾರಿ ಉತ್ಸವ ಮಾಡಿದ್ದಾರೆ ಎಂದು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಸವದಲ್ಲಿ ಪಾಲ್ಗೊಂಡಿದ್ದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಗ್ರಾಮದೇವತೆಯನ್ನು ಹೊತ್ತ ಆನೆ ಹಾರ ಹಾಕಿದ್ದು ವಿಶೇಷವಾಗಿತ್ತು.

ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್   ಉತ್ಸವದಲ್ಲಿ ಭಾಗವಹಿಸಿ, ಗ್ರಾಮದೇವತೆಯ ದರ್ಶನ ಪಡೆದರು.

ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಜಾತ್ರಾ ಸಮಿತಿಯ ಎಸ್.ಜಿ.ಪರಮೇಶ್ವರಪ್ಪ, ಕೆ.ಪಿ.ಕುಮಾರಸ್ವಾಮಿ, ಕೆ.ರೇವಣಸಿದ್ದಪ್ಪ, ಕೆ.ಎಂ.ಸಿದ್ದಯ್ಯ, ಡಿ.ಡಿ.ಚಿಕ್ಕಪ್ಪ, ಜಿ.ಹೆಚ್.ಬಸವರಾಜ್, ಟಿ.ಲೋಕೇಶ್, ಎ.ಡಿ.ಹನುಮಂತಪ್ಪ, ಜಿ.ಆರ್.ಬಸವನಗೌಡ, ಕೋರಿ ನಾಗರಾಜ್, ಕೊಕ್ಕನೂರು ಅಂಜಿನಪ್ಪ ಸೇರಿದಂತೆ ಇನ್ನೂ ಅನೇಕರು ಶ್ರಮವಹಿಸಿ ಉತ್ಸವವನ್ನು ಯಶಸ್ವಿಗೊಳಿಸಿದರು.

ಉಡಿ ತುಂಬಿದ ಮಹಿಳೆಯರು : ಗ್ರಾಮದೇವತೆ ಏಳೂರು ಕರಿಯಮ್ಮ ದೇವಸ್ಥಾನದಲ್ಲಿ ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಮಹಿಳೆಯರು ದೇವಿಗೆ ಉಡಿ ತುಂಬಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು. 14 ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರೆಗೆ ಭಕ್ತರು, ಬಂಧು-ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದರಿಂದ ಹಾಲಿವಾಣ ಜನರಿಂದ ತುಂಬಿ ತುಳುಕುತ್ತಿದೆ.

ಬಲಿದಾನ : ಬುಧವಾರ ಬೆಳಗಿನ ಜಾವ 4.30ಕ್ಕೆ ಏಳೂರು ಘಟೆ ಮೆರವಣಿಗೆ ಬಂದ ನಂತರ, ಓಕುಳಿ ತುಂಬಿದ ಹಿಟ್ಟಿನ ಕೋಣಗಳ ಬಲಿದಾನ ನಡೆಯಲಿದ್ದು, ಬೆಳಿಗ್ಗೆ 6 ಗಂಟೆಗೆ ಗ್ರಾಮದಲ್ಲಿ ಚರಗ ಹಾಕಲಾಗುವುದು. ಬೆಳಿಗ್ಗೆ 8 ಗಂಟೆಯಿಂದ ದೇವಸ್ಥಾನದಲ್ಲಿ ಭಕ್ತರಿಂದ ವಿವಿಧ ಹರಕೆ, ಸೇವೆಗಳು ನೆರವೇರಲಿವೆ.

ಗುರುವಾರ ಸಂಜೆ 4 ಗಂಟೆಯಿಂದ ಸಿಡಿ ಉತ್ಸವ ಜರುಗಲಿದ್ದು, ರಾತ್ರಿ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. ಶುಕ್ರವಾರ ಬೆಲ್ಲದ ಬಂಡಿ ಉತ್ಸವ, ಓಕುಳಿ ನಂತರ ಸಂಜೆ ಸೇವಿಗೆ ಮಹಾಮಂಗಳಾರತಿ ಪೂಜೆ ಸಲ್ಲಿಸಿ, ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದು.

error: Content is protected !!